ಕಾಸರಗೋಡು: ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಅನಾವರಣಗೊಳಿಸುವ ಉದ್ದೇಶದಿಂದ ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಶಾಲಾ ಕಲೋತ್ಸವದಲ್ಲಿ ಕನ್ನಡದ ವಿದ್ಯಾರ್ಥಿ ಪ್ರತಿಭೆಗಳಿಗೆ ಮತ್ತೆ ಅನ್ಯಾಯವಾಗುತ್ತಿದೆ. ಹಿಂದಿನ ವರ್ಷಗಳಲ್ಲಿ ಶಾಲಾ ಮಟ್ಟದಲ್ಲಿ, ಆ ಬಳಿಕ ಉಪಜಿಲ್ಲಾ ಮಟ್ಟದಲ್ಲಿ ಹಾಗು ಜಿಲ್ಲಾ ಮಟ್ಟದಲ್ಲಿ ಕನ್ನಡ ವಿದ್ಯಾರ್ಥಿಗಳಿಗೆ ಸ್ಪರ್ಧಿಸುವ ಅವಕಾಶವಿತ್ತು. ಆದರೆ ಈ ಬಾರಿ ಕನ್ನಡ ವಿದ್ಯಾರ್ಥಿಗಳು ಉಪಜಿಲ್ಲಾ ಮಟ್ಟದ ನಂತರ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ. ಜಿಲ್ಲಾ ಮಟ್ಟದಲ್ಲಿ ಈ ಹಿಂದೆ ನಡೆಸುತ್ತಿದ್ದ ಸ್ಪರ್ಧೆಗಳನ್ನು ಕೈಬಿಡಲಾಗಿದೆ. ಈ ಕಾರಣದಿಂದ ಕನ್ನಡದ ವಿದ್ಯಾರ್ಥಿಗಳಿಗೆ ಉಪಜಿಲ್ಲಾ ಮಟ್ಟದಲ್ಲಿ ಮಾತ್ರವೇ ಸ್ಪರ್ಧಿಸುವ ಅವಕಾಶ ಲಭಿಸಲಿದೆ.
ಸರ್ಕಾರದ ಮ್ಯಾನ್ವಲ್‍ನಲ್ಲಿ ಸೇರ್ಪಡೆಗೊಳಿಸದಿರುವುದರಿಂದ ಸ್ಪರ್ಧೆಗಳನ್ನು ನಡೆಸದಿರಲು ಜಿಲ್ಲಾ ಮಟ್ಟದಲ್ಲಿ ತೀರ್ಮಾನಿಸಲಾಗಿದೆ. ಉಪ ಜಿಲ್ಲಾ ಮಟ್ಟದಲ್ಲಿ ಕನ್ನಡ ವಿದ್ಯಾರ್ಥಿಗಳಿಗೆ ಕೇವಲ 11 ವಿಭಾಗದ ಸ್ಪರ್ಧೆಗಳು ಮಾತ್ರವೇ ನಡೆಯತ್ತದೆ.
ನ.1 ರಂದು ಕಾಸರಗೋಡು ಪ್ರೆಸ್‍ಕ್ಲಬ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎ.ಇ.ಒ. ಅಗಸ್ಟಿನ್ ಬರ್ನಾಡ್ ಅವರು ಕನ್ನಡದ ಸ್ಪರ್ಧೆಗಳು ಉಪಜಿಲ್ಲಾ ಮಟ್ಟದಲ್ಲಿ ಮಾತ್ರವೇ ನಡೆಯುತ್ತದೆ ಎಂದಿದ್ದಾರೆ.
ಮನವಿ ಸಲ್ಲಿಕೆ : ಈ ಹಿಂದಿನಂತೆಯೇ ಕನ್ನಡದ ವಿದ್ಯಾರ್ಥಿಗಳಿಗೆ ಕಾಸರಗೋಡು ಜಿಲ್ಲಾ ಮಟ್ಟದಲ್ಲಿ ಶಾಲಾ ಕಲೋತ್ಸವ ಸ್ಪರ್ಧೆಗಳನ್ನು ಏರ್ಪಡಿಸಬೇಕೆಂದು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಡಿಡಿಇ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದೆ. ಎಲ್‍ಪಿ, ಯುಪಿ, ಎಚ್.ಎಸ್ ಮತ್ತು ಎಚ್‍ಎಸ್‍ಎಸ್ ವಿದ್ಯಾರ್ಥಿಗಳಿಗಾಗಿ ಒಟ್ಟು 11 ಸ್ಪರ್ಧೆಗಳನ್ನು ನಡೆಸಲಾಗುತ್ತಿತ್ತು. ಈ ಸ್ಪರ್ಧೆಗಳನ್ನು ಈ ವರ್ಷವೂ ಜಿಲ್ಲಾ ಮಟ್ಟದಲ್ಲಿ ನಡೆಸಬೇಕೆಂದು ಮನವಿಯಲ್ಲಿ ವಿನಂತಿಸಿದೆ. ಅಲ್ಲದೆ ಮಾನವ ಹಕ್ಕು ಆಯೋಗಕ್ಕೂ ಕೂಡಾ ಮನವಿ ಸಲ್ಲಿಸಿ ಸ್ಪರ್ಧೆಯನ್ನು ಕೈಬಿಡದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.
ಶಾಸಕರಿಗೆ ಮನವಿ : ಶಾಲಾ ಕಲೋತ್ಸವದ ಸಂದರ್ಭದಲ್ಲಿ ಕನ್ನಡದ ಸ್ಪರ್ಧೆಗಳನ್ನು ಆನ್‍ಲೈನ್‍ನಲ್ಲಿ ಇಲ್ಲದಿದ್ದರೂ ಆಫ್‍ಲೈನ್ ಮೂಲಕ ಇಲ್ಲಿಯವರೆಗೆ ಉಪಜಿಲ್ಲಾ ಹಾಗೂ ಜಿಲ್ಲಾಮಟ್ಟದಲ್ಲೂ ಕನ್ನಡ ಕಲೋತ್ಸವ ಹೆಸರಿನಲ್ಲಿ ಸ್ಪರ್ಧೆಗಳು ನಡೆಯುತ್ತಿದ್ದವು. ಆದರೆ ಈ ವರ್ಷ ಕೆಲವು ಉಪಜಿಲ್ಲೆಗಳಲ್ಲೂ, ಜಿಲ್ಲಾ ಮಟ್ಟದಲ್ಲೂ ಕನ್ನಡದ ವಿವಿಧ ಸ್ಪರ್ಧೆಗಳನ್ನು ಕೈಬಿಟ್ಟಿರುವುದರಿಂದ ಆ ಸ್ಪರ್ಧೆಗಳನ್ನು ಈ ಮೊದಲು ನಡೆಸಿದಂತೆ ಜಿಲ್ಲಾ ಮಟ್ಟದಲ್ಲಿ ನಡೆಸಬೇಕೆಂಬ ಮನವಿಯನ್ನು ಕೇರಳ ಪ್ರದೇಶ ಸ್ಕೂಲ್ ಟೀಚರ್ಸ್ ಅಸೋಸಿಯೇಷನ್ ಕುಂಬಳೆ ಉಪಜಿಲ್ಲಾ ಘಟಕವು ಶಾಸಕರಾದ ಎನ್.ಎ.ನೆಲ್ಲಿಕುನ್ನು ಅವರಲ್ಲಿ ವಿನಂತಿಸಿದೆ.
ಶಾಲಾ ಕಲೋತ್ಸವ : ಮತ್ತೆ ಕನ್ನಡದ ವಿದ್ಯಾರ್ಥಿ ಪ್ರತಿಭೆಗಳಿಗೆ ಅನ್ಯಾಯ
0
ನವೆಂಬರ್ 02, 2022