ಅಹಮದಾಬಾದ್: ವಿಧಾನಸಭಾ ಚುನಾವಣೆ (Gujarat polls) ದಿನಾಂಕ ಘೋಷಣೆಯಾದ ಬೆನ್ನಲ್ಲೇ ಗುಜರಾತ್ನಲ್ಲಿ ರಾಜಕೀಯ ಚಟುವಟಿಕೆ ರಂಗೇರಿದ್ದು, ಚುನಾವಣಾ ಕಣಕ್ಕೆ ಕಳೆಬಂದಿದೆ. ಇಂದು ಬಿಜೆಪಿ (BJP) ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಟೀಮ್ ಇಂಡಿಯಾದ ಆಟಗಾರ ರವೀಂದ್ರ ಜಡೇಜಾ (Ravindra Jadeja) ಅವರ ಪತ್ನಿ ರಿವಾಬಾ ಜಡೇಜಾ ಬಿಜೆಪಿಯಿಂದ ಟಿಕೆಟ್ (BJP Ticket) ಗಿಟ್ಟಿಸಿಕೊಂಡಿದ್ದಾರೆ.
ಗುಜರಾತ್ ವಿಧಾನಸಭೆಯ ಜಾಮ್ನಗರ ಉತ್ತರ ವಿಧಾನಸಭಾ ಕ್ಷೇತ್ರದಿಂದ ರಿವಾಬಾ (Rivaba Jadeja) ಸ್ಪರ್ಧಿಸಲಿದ್ದಾರೆ. ರಿವಾಬಾ ಜಡೇಜಾ ಅವರು 1990ರ ಸೆ. 5ರಂದು ಜನಿಸಿದರು. ಗುಜರಾತ್ನ ರಾಜ್ಕೋಟ್ನಲ್ಲಿರುವ ಆತ್ಮೀಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ ಕಾಲೇಜಿನಲ್ಲಿ ಮೆಕಾನಿಕಲ್ ಇಂಜಿನಿಯರ್ ಓದಿದ್ದಾರೆ. 2016ರಲ್ಲಿ ಜಡೇಜಾರನ್ನು ವರಿಸಿದರು. 2019ರಲ್ಲಿ ಬಿಜೆಪಿ ಪಕ್ಷ ಸೇರಿಕೊಂಡು, ಸಕ್ರೀಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ.
ರವೀಂದ್ರ ಜಡೇಜಾ ಸಹೋದರಿ, ನೈನಾ ಜಡೇಜಾ ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಜಡೇಜಾ ಪತ್ನಿ ಹಾಗೂ ಸೋದರಿ, ಒಂದೇ ಕ್ಷೇತ್ರದಲ್ಲಿ ಬೇರೆ ಬೇರೆ ಪಕ್ಷದಿಂದ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ. ಸದ್ಯಕ್ಕೆ ರಿವಾಬಾಗೆ ಬಜೆಪಿಯಿಂದ ಟಿಕೆಟ್ ಖಚಿತವಾಗಿದೆ.
ಈ ವರ್ಷದ ಡಿಸೆಂಬರ್ನಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಗಾಗಿ ಬಿಜೆಪಿ ಇಂದು ಅಭ್ಯರ್ಥಿಗಳ (BJP Candidates List) ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸುಮಾರು 160 ಅಭ್ಯರ್ಥಿಗಳ ಹೆಸರು ಮತ್ತು ಸ್ಪರ್ಧಿಸುವ ಕ್ಷೇತ್ರಗಳ ಬಗ್ಗೆ ಮಾಹಿತಿ ಇರುವ ಪಟ್ಟಿಯನ್ನು ಕೇಂದ್ರ ಸಚಿವ ಭೂಪೇಂದ್ರ ಯಾದವ್ ಬಿಡುಗಡೆ ಮಾಡಿದರು.
ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ (bhupendra Patel) ಘಟ್ಲೋಡಿಯಾ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ. ಮಾಜಿ ಸಿಎಂ ವಿಜಯ್ ರೂಪಾಣಿ (Vijay Rupani) ಮತ್ತು ಪಕ್ಷದ ಹಿರಿಯ ನಾಯಕ ಭೂಪೇಂದ್ರಸಿನ್ಹ್ ಚುಡಾಸಮಾ ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿದಿರುವುದಾಗಿ ಈಗಾಗಲೇ ಘೋಷಣೆ ಮಾಡಿದ್ದಾರೆ.
ಡಿಸೆಂಬರ್ 1 ಮತ್ತು 5ಕ್ಕೆ ಎರಡು ಹಂತಗಳಲ್ಲಿ ಗುಜರಾತ್ನಲ್ಲಿ ಮತದಾನ ನಡೆಯಲಿದ್ದು, ಡಿ.8ಕ್ಕೆ ಫಲಿತಾಂಶ ಹೊರ ಬೀಳಲಿದೆ. ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶವು ಕೂಡ ಅಂದೇ ಹೊರಬೀಳಲಿದೆ. ಗುಜರಾತ್ ವಿಧಾನಸಭೆಯು 182 ಸ್ಥಾನಗಳನ್ನು ಹೊಂದಿದ್ದು, ಬಹುಮತ ಪಡೆಯಲು 92 ಸ್ಥಾನ ಅಗತ್ಯ. ಹಿಮಾಚಲಪ್ರದೇಶ ವಿಧಾನಸಭೆಯು 68 ಕ್ಷೇತ್ರಗಳನ್ನ ಹೊಂದಿದ್ದು, ಬಹುಮತ ಪಡೆಯಲು 35 ಸ್ಥಾನ ಅಗತ್ಯ. ಸದ್ಯ ಎರಡೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದೆ.