ಬೆಂಗಳೂರು: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ರಾಜ್ಯದಲ್ಲಿ ತೀರ್ವ ಆಂತಕ ಮೂಡಿಸಿತ್ತು. ಇದೀಗ ತನಿಖೆಯನ್ನು ಎನ್‌ಐಎ ತನಿಖೆಗೆ ಕೇಂದ್ರ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಮಂಗಳೂರಿನ ಆಟೋದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಪೊಲೀಸರು ಪ್ರಾಥಮಿಕ ತನಿಖೆ ಮಾಡಿದ್ದಾರೆ. ಈ ತನಿಖೆಯಲ್ಲಿ ಸಂಗ್ರಹಿಸಲಾದ ಸಾಕ್ಷ್ಯಗಳನ್ನು ಆಧರಿಸಿ ರಾಜ್ಯ ಸರ್ಕಾರ ಯುಎಪಿಎ ಕಾಯ್ದೆ ಅನ್ವಯ ಎನ್ಐಎ ತನಿಖೆ ನಡೆಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಿತ್ತು.
ಕಳೆದ ನವೆಂಬರ್ 20ರಂದು ಮಂಗಳೂರಿನ ಕಂಕನಾಡಿ ಬಳಿ ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ದಿಢೀರ್ ನಿಗೂಢ ಸ್ಫೋಟ ಸಂಭವಿಸಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಶಶಿಕುಮಾರ್ ಹಾಗೂ ವಿಧಿವಿಜ್ಞಾನ ಇಲಾಖೆಯ ತಜ್ಞರು ಹಾಗೂ ಬಾಂಬ್ ನಿಷ್ಕ್ರಿಯ ದಳ ದೌಡಾಯಿಸಿ ಪರಿಶೀಲನೆ ನಡೆಸಿತ್ತು.
ಶಿವಮೊಗ್ಗದ ತುಂಗಾ ನದಿ ದಡದಲ್ಲಿರುವ ಕೆಮ್ಮನಗುಂಡಿ ಎಂಬ ಸ್ಥಳದಲ್ಲಿ ನಡೆದಿದ್ದ ಪ್ರಾಯೋಗಿಕವಾಗಿ ಬಾಂಬ್ ಸ್ಫೋಟದಲ್ಲಿ ಶಾರೀಕ್ ಪಾತ್ರವಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಆತನ ಬೆನ್ನು ಬಿದ್ದಿದ್ದರು. ನಂತರ ಆತ ತಲೆಮರೆಸಿಕೊಂಡಿದ್ದು ಇದೀಗ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಮಾಡಿ ಸಿಕ್ಕಿಬಿದ್ದಿದ್ದಾನೆ. ಪ್ರಕರಣದ ಆರೋಪಿ ಶಂಕಿತ ಉಗ್ರ ಶಾರೀಕ್ ಬಗ್ಗೆ ಆಘಾತಕಾರಿ ಅಂಶಗಳು ಬೆಳಕಿಗೆ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಇದೀಗ ಈ ಪ್ರಕರಣವನ್ನು ರಾಜ್ಯ ಸರ್ಕಾರ, ಎನ್ಐಎ ತನಿಖೆಗೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿತ್ತು. ಶಂಕಿತ ಉಗ್ರ ಶಾರೀಕ್ ವಿರುದ್ಧ ಯುಎಪಿಎ ಕಾಯ್ದೆ ಅನ್ವಯ ಎನ್ಐಎ ತನಿಖೆ ನಡೆಸಲು ರಾಜ್ಯ ಸರ್ಕಾರ ಶಿಫಾರಸು ಮಾಡಿತ್ತು.