ಕಾಸರಗೋಡು: ಮುಂದಿನ ಪೀಳಿಗೆಯನ್ನು ಮಾದಕದ್ರವ್ಯದ ಜಾಲದಿಂದ ಪಾರುಮಾಡುವ ನಿಟ್ಟಿನಲ್ಲಿ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲಾ ವಿದ್ಯಾರ್ಥಿಗಳು, ಹೆತ್ತವರು ಹಾಗೂ ಶಿಕ್ಷಕರು ಕೇರಳರಾಜ್ಯೋತ್ಸವ ದಿನದಂದು ಪ್ರತಿಜ್ಞೆ ಕೈಗೊಂಡರು. ಕಳೆದ ಒಂದು ತಿಂಗಳಿಂದ ಜಿಲ್ಲೆಯಾದ್ಯಂತ ಶಾಲೆಗಳಲ್ಲಿ ನಡೆದುಬರುತ್ತಿದ್ದ ಮಾದಕ ವ್ಯಸನ ಮುಕ್ತ ಕೇರಳ ಕಾರ್ಯಕ್ರಮದ ಸಮಾರೋಪದ ಅಂಗವಾಗಿ ಶಾಲೆಯಲ್ಲಿ ಮಾದಕದ್ರವ್ಯ ವಿರುದ್ಧ ಪ್ರತಿಜ್ಞೆ ಸ್ವೀಕಾರ, ಮಾನವ ಸರಪಳಿ, ಭಿತ್ತಿಪತ್ರ ಪ್ರದರ್ಶನ ನಡೆಯಿತು.
ಶಾಲಾ ಎನ್‍ಸಿಸಿ, ನೇಚರ್‍ಕ್ಲಬ್ ಸೇರಿದಂತೆ ವಿವಿಧ ಕ್ಲಬ್‍ಗಳ ವಿದ್ಯಾರ್ಥಿಗಳು, ಶಾಲಾ ರಕ್ಷಕ ಶಿಕ್ಷಕ ಸಂಘ, ಶಿಕ್ಷಕ ವೃಂದದವರು, ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಕೈಜೋಡಿಸಿದರು. ಬದಿಯಡ್ಕ ಪೊಲೀಸ್ ಠಾಣೆಯ ಚೈಲ್ಡ್ ಪ್ರೊಟೆಕ್ಷನ್ ಅಧಿಕಾರಿ ಪ್ರಕಾಶ್ ಹಾಗೂ ಅಜಿತ್ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭ ಚೈಲ್ಡ್ ಪ್ರೊಟೆಕ್ಷನ್ ಅಧಿಕಾರಿ ಪ್ರಕಾಶ್ ಮಾತನಾಡಿ, ಮಾದಕ ದ್ರವ್ಯ ವಿರುದ್ಧದ ಹೋರಾಟ ಈಗಷ್ಟೆ ಆರಂಭಗೊಂಡಿದೆ. ಈ ಹೋರಾಟ ನಿರಂತರ ಪ್ರಕ್ರಿಯೆಯಾಗಬೇಕು. ವಿದ್ಯಾರ್ಥಿಗಳೇ ಈ ಹೋರಾಟದ ಮುಂಚೂಣಿ ನೇತೃತ್ವ ವಹಿಸಬೇಕು. ಈ ಮೂಲಕ ಸಾಮಾಜವನ್ನು ಕಾಡುತ್ತಿರುವ ಪಿಡುಗನ್ನು ಹೋಗಲಾಡಿಸಲು ಪಣತೊಡಬೇಕು ಎಂದು ತಿಳಿಸಿದರು. ಶಾಲಾ ಹಿರಿಯ ಶಿಕ್ಷಕ ಕೇಶವ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಪಿಟಿಎ ಅಧ್ಯಕ್ಷ ಪುರುಷೋತ್ತಮ ಬಿ.ಎಂ, ಸದಸ್ಯ ವಿನೋದ್ ಅಮೆಕ್ಕಳ, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಶಿಕ್ಷಕ ಮಹಾಬಲೇಶ್ವರ ಭಟ್ ಮಾದಕ ದ್ರವ್ಯ ವಿರುದ್ಧ ಪ್ರತಿಜ್ಞೆ ಬೋಧಿಸಿದರು. ಈ ಸಂದರ್ಭ ಉಪಜಿಲ್ಲಾ ಮಟ್ಟದ ಶಾಲಾ ವಿಜ್ಞಾನ ಮೇಳದಲ್ಲಿ ಬಹುಮಾನ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ, ಸ್ಮರಣಿಕೆ ವಿತರಿಸಲಾಯಿತು.
ಮಾದಕದ್ರವ್ಯ ವಿರುದ್ಧ ಬೀದಿಗಿಳಿದ ವಿದ್ಯಾರ್ಥಿಗಳು: ಪೆರ್ಲದಲ್ಲಿ ಮಾನವ ಸರಪಳಿ ಮೂಲಕ ಜಾಗೃತಿ
0
ನವೆಂಬರ್ 02, 2022