ಉಪ್ಪಳ: ಮಾದಕವಸ್ತು ಮುಕ್ತ ಕೇರಳ ಯೋಜನೆಯ ಅಂಗವಾಗಿ ಮಂಜೇಶ್ವರ ಬಿಆರ್ ಸಿ ಇದರ ಆಶ್ರಯದಲ್ಲಿ ಉಪ್ಪಳ ಪೇಟೆಯಲ್ಲಿ ಮಂಗಳವಾರ ಅಪರಾಹ್ನ ಮಾದಕ ವಸ್ತು ವಿರೋಧಿ ರ್ಯಾಲಿ ನಡೆಯಿತು. ಮಾದಕ ವಸ್ತು ವಿರೋಧಿ ಜಾಗೃತಿ ಕರಪತ್ರ ವಿತರಿಸಲಾಯಿತು. ಮಾದಕ ದ್ರವ್ಯ ವಿರೋಧಿ ಪ್ರತಿಜ್ಞೆ ಹಾಗೂ ಸಾಂಕೇತಿಕವಾಗಿ ಮಾದಕ ವಸ್ತು ದಹನ ಮಾಡಲಾಯಿತು.
ಉಪ್ಪಳ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಹಾಗೂ ಎಸ್.ಎಸ್.ಬಿ.ಎ.ಯು.ಪಿ.ಎಸ್ ಐಲ ಶಾಲೆಯ ವಿದ್ಯಾರ್ಥಿಗಳು, ಬಿಆರ್‍ಸಿ ಕಾರ್ಯಕರ್ತರು ಹಾಗೂ ಶಿಕ್ಷಕರು ರ್ಯಾಲಿಯಲ್ಲಿ ಭಾಗವಹಿಸಿದ್ದರು.
ಉಪ್ಪಳ ಪೇಟೆಯಲ್ಲಿ ನಡೆದ ಸಭೆಯನ್ನು ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯ ಗೋಲ್ಡನ್ ಅಬ್ದುಲ್ ರಹಮಾನ್ ಉದ್ಘಾಟಿಸಿದರು. ಸಮಗ್ರ ಶಿಕ್ಷಾ ಕೇರಳ ಕಾರ್ಯಕ್ರಮ ಸಂಯೋಜಕ ಡಿ.ನಾರಾಯಣ ಮಾದಕವಸ್ತು ವಿರೋಧಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಉಪಜಿಲ್ಲಾ ಶಿಕ್ಷಣಾಧಿಕಾರಿ ವಿ.ದಿನೇಶ ಅಧ್ಯಕ್ಷತೆ ವಹಿಸಿದ್ದರು. ಬಿ.ಪಿ.ಸಿ.ವಿಜಯಕುಮಾರ್ ಪಾವಳ ಸ್ವಾಗತಿಸಿ, ಜೋಯ್.ಜಿ ವಂದಿಸಿದರು.