ಕಾಸರಗೋಡು: ಬದಿಯಡ್ಕದ ದಂತ ವೈದ್ಯ ಕೃಷ್ಣಮೂರ್ತಿ ಸರ್ಪಂಗಳ (57) ಅವರ ನಿಗೂಢ ಸಾವಿಗೆ ಸಂಬಂಧಿಸಿ ಬಂಧಿತರಾದ ಮುಸ್ಲಿಂ ಲೀಗ್‍ನ ಸ್ಥಳೀಯ ಮುಖಂಡರು ಸೇರಿದಂತೆ ಐದು ಮಂದಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಇವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಕುಂಬ್ಡಾಜೆ ನಿವಾಸಿ ಅಶ್ರಫ್, ಕುಂಬ್ಡಾಜೆ ಅನ್ನಡ್ಕದ ಮುಹಮ್ಮದ್ ಶಿಹಾಬುದ್ದೀನ್, ವಿದ್ಯಾಗಿರಿ ಸನಿಹದ ಮುನಿಯೂರು ನಿವಾಸಿ ಉಮರುಲ್ ಫಾರೂಕ್, ಮುಹಮ್ಮದ್ ಹನೀಫಾ, ಅಲಿಯಾಸ್ ಅನ್ವರ್ ಓಝೋನ್ ಮತ್ತು ಅಲಿ ಬದಿಯಡ್ಕ ಚನ್ನಾರಕಟ್ಟೆ ನಿವಾಸಿ ಮಹಮ್ಮದ್ ಹನೀಫಾ ನ್ಯಾಯಾಂಗ ಬಂಧನಕ್ಕೊಳಗಾದವರು. ಇವರ ವಿರುದ್ಧ ಕ್ಲಿನಿಕ್‍ಗೆ ಅತಿಕ್ರಮಿಸಿ ನುಗ್ಗಿ, ಜೀವ ಬೆದರಿಕೆಯೊಡ್ಡಿರುವುದು ಅಲ್ಲದೆ ಆತ್ಮಹತ್ಯೆಗೆ ದುಷ್ಪ್ರೇರಣೆ ನೀಡಿರುವ ಬಗ್ಗೆ ಕೇಸು ದಾಖಲಿಸಿಕೊಳ್ಳಲಾಗಿದೆ.
ಈ ಮಧ್ಯೆ ಡಾ. ಕೃಷ್ಣಮೂರ್ತಿ ಅವರು ಬದಿಯಡ್ಕದಿಂದ ನಾಪತ್ತೆಯಾಗುವ ಮೊದಲು ಬದಿಯಡ್ಕದಲ್ಲಿ ನಡೆದಿರುವ ಕೆಲವೊಂದು ಘಟನೆಗಳ ಕುರಿತು ಬದಿಯಡ್ಕ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜತೆಗೆ ವೈದ್ಯರ ಮೃತದೇಹ ಪತ್ತೆಯಾದ ಕುಂದಾಪುರ ಠಾಣೆ ವ್ಯಾಪ್ತಿಗೂ ತನಿಖೆ ಮುಂದುವರಿಸಲಾಗಿದೆ. ವೈದ್ಯರ ಕ್ಲಿನಿಕ್‍ಗೆ ತೆರಳಿ ತಂಡವೊಂದು ಬೆದರಿಕೆಯೊಡ್ಡಿರುವ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ. ಬದಿಯಡ್ಕದಿಂದ ಕುಂಬಳೆಗೆ ವೈದ್ಯ ಕೃಷ್ಣಮೂರ್ತಿ ಬೈಕ್‍ಮೂಲಕ ತೆರಳಿರುವುದಾಗಿ ಹೇಳಲಾಗುತ್ತಿದ್ದರೂ, ಈ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಇವರ ಬೈಕ್ ಕುಂಬಳೆ ಪೇಟೆಯ ಬದಿಯಡ್ಕ ರಸ್ತೆಯಲ್ಲಿ ಪತ್ತೆಯಾಗಿತ್ತು. ಅಲ್ಲಿಂದ ಕುಂದಾಪುರಕ್ಕೆ ಯಾವ ಹಾದಿಯಾಗಿ ಸಂಚರಿಸಿದ್ದಾರೆ ಎಂಬ ಬಗ್ಗೆಯೂ ಸ್ಪಷ್ಟತೆಯಿಲ್ಲದಾಗಿದೆ. ಇದೇ ಸಂದರ್ಭ ಡಾ. ಕೃಷ್ಣಮೂರ್ತಿ ಅವರ ಮೃತದೇಹ ಪತ್ತೆಯಾದ ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವೈದ್ಯರ ಸಾವಿನ ಬಗ್ಗೆ ನಿಗೂಢತೆಗಳೇ ಹೆಚ್ಚಾಗಿದ್ದು, ಸಮಗ್ರ ತನಿಖೆಗೆ ವ್ಯಾಪಕ ಆಗ್ರಹ ಕೇಳಿಬರಲಾರಂಭಿಸಿದೆ.
ಗೃಹಸಚಿವಗೆ ಮನವಿ:
ಬದಿಯಡ್ಕದ ಖ್ಯಾತ ದಂತ ವೈದ್ಯ ಕೃಷ್ಣಮೂರ್ತಿ ಸರ್ಪಂಗಳ ಅವರ ನಿಗೂಢ ಸಾವಿನ ಕುರಿತು ಸಮಗ್ರ ತನಿಖೆ ನಡೆಸುವಂತೆ ಕರ್ನಾಟಕ ಗೃಹಸಚಿವ ಅರಗ ಜ್ಞಾನೇಂದ್ರ ಅವರಿಗೆ ಮನವಿ ಸಲ್ಲಿಸಲಾಯಿತು. ಮಂಗಳೂರು ಭೇಟಿ ಸಂದರ್ಭ ಡಾ. ಕೃಷ್ಣಮೂರ್ತಿ ಅವರ ಪುತ್ರಿ ಡಾ. ವರ್ಷಾ, ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ, ವಿಹಿಂಪ ರಾಜ್ಯ ಕಾರ್ಯದರ್ಶಿ ಶರಣ್‍ಪಂಪ್‍ವೆಲ್, ಬಿಜೆಪಿ ಬದಿಯಡ್ಕ ಮಂಡಲ ಸಮಿತಿ ಅದ್ಯಕ್ಷ ಹರೀಶ್ ನಾರಂಪಾಡಿ, ವಿಹಿಂಪ ಬದಿಯಡ್ಕ ಮಂಡಲ ಕಾರ್ಯದರ್ಶಿ ಮಂಜುನಾಥ ಮಾನ್ಯ, ಭಜರಂಗದಳ ಸಂಯೋಜಕ ರಂಜಿತ್, ವಿಹಿಂಪ ಸತ್ಸಂಗ ಪ್ರಮುಖ್ ರೋಹಿತಾಕ್ಷ ಬದಿಯಡ್ಕ ಉಪಸ್ಥಿತರಿದ್ದರು. ಡಾ. ಕೃಷ್ಣಮೂರ್ತಿ ಅವರನ್ನು ಕೊಲೆಗೈದಿರುವುದಾಗಿ ಸಂಶಯಿಸಲಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮನವಿಯಲ್ಲಿ ಒತ್ತಾಯಿಸಲಾಯಿತು. ವೈದ್ಯರ ಸಾವಿನ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.
ದಂತ ವೈದ್ಯ ನಿಗೂಢ ಸಾವು: ಬಂಧಿತ ಐದು ಮಂದಿಗೆ ನ್ಯಾಯಾಂಗ ಬಂಧನ: ಕರ್ನಾಟಕ ಗೃಹಸಚಿವರಿಗೆ ಮನವಿ, ಸಮಗ್ರ ತನಿಖೆಗೆ ಹೆಚ್ಚಿದ ಆಗ್ರಹ
0
ನವೆಂಬರ್ 13, 2022