ತಿರುವನಂತಪುರಂ: ಬೆತ್ತಲೆ ವಿಡಿಯೋ ರೆಕಾರ್ಡ್ ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿ, ಏಳು ವರ್ಷಗಳ ಕಾಲ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪೊಲೀಸ್ ಅಧಿಕಾರಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕಚನಿ ಮೂಲದ ಸಬು ಪನಿಕ್ಕರ್ (48) ಎಂದು ಗುರುತಿಸಲಾಗಿದೆ. ಈತ ಕೇರಳದ ವಿಜಿಲೆನ್ಸ್ ಗ್ರೇಡ್ ಎಸ್ಸಿಪಿಒ ಆಗಿ ಕಾರ್ಯ ನಿರ್ವಹಿಸುತ್ತಿದ್ದ. 40 ವರ್ಷದ ಸಂತ್ರಸ್ತ ಮಹಿಳೆ ನೀಡಿರುವ ದೂರಿನ ಆಧಾರದ ಮೇಲೆ ಅರುವಿಕ್ಕರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವ ಮಹಿಳೆಯ ಬೆತ್ತಲೆ ವಿಡಿಯೋವನ್ನು ಆರೋಪಿ ರೆಕಾರ್ಡ್ ಮಾಡಿಟ್ಟುಕೊಂಡಿದ್ದ. ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇನೆಂದು ಹೆದರಿಸಿ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಸುಮಾರು 7 ವರ್ಷಗಳ ಕಾಲ ಮಹಿಳೆಯನ್ನು ಆರೋಪಿ ತನ್ನ ಕಾಮತೃಷೆಗೆ ದುರ್ಬಳಕೆ ಮಾಡಿಕೊಂಡಿದ್ದಾನೆ.
ಆರೋಪಿ ವಿಡಿಯೋ ಕ್ಲಿಪ್ ಅನ್ನು ಹರಿಬಿಟ್ಟ ಬಳಿಕ ಮಹಿಳೆ ಇತ್ತೀಚೆಗೆ ಅರುವಿಕ್ಕರ ಪೊಲೀಸರಿಗೆ ದೂರು ನೀಡಿದ್ದರು. ವಿಡಿಯೋ ಹರಿಬಿಟ್ಟ ಇಬ್ಬರನ್ನು ಈಗಾಗಲೇ ಬಂಧಿಸಲಾಗಿದೆ.