ಕೊಚ್ಚಿ: ಸರ್ಕಾರಿ ಶಾಲೆಯ ಆವರಣದಲ್ಲಿ ಸಾಮಾನ್ಯವಾಗಿ ಹಣ್ಣಿನ ಮರ-ಗಿಡಗಳು ಬೆಳೆದಿರುತ್ತವೆ. ಇದನ್ನು ಯಾರೂ ಕೂಡ ತಮ್ಮ ಖಾಸಗಿ ಉಪಯೋಗಕ್ಕೆ ಬಳಸಿಕೊಳ್ಳುವುದಿಲ್ಲ. ಇದೆಲ್ಲವೂ ಒಂದರ್ಥದಲ್ಲಿ ಸಾರ್ವಜನಿಕವಾಗಿ ಬಳಕೆಯಾಗುತ್ತವೆ. ಹೀಗಿದ್ದರೂ ಪಂಚಾಯತ್ ಉಪಾಧ್ಯಕ್ಷನೊಬ್ಬ ಸರ್ಕಾರಿ ಶಾಲೆಯ ಆವರಣದಲ್ಲಿದ್ದ ಹಲಸಿನ ಮರವನ್ನು ತನ್ನ ಖಾಸಗಿ ಉಪಯೋಗಕ್ಕೆ ಕಡಿದು, ಇದೀಗ ಪಕ್ಷದಿಂದಲೇ ಕೆಳಗಿಳಿಯಬೇಕಾದ ಪರಿಸ್ಥಿತಿ ಬಂದೊದಗಿದೆ.
ಹೌದು, ಕೊಟ್ಟಾಯಂನ ಮರವಂತುರುತು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಮೃದ್ಧವಾಗಿ ಹಲಸಿನ ಮರ ಬೆಳೆದು ಫಸಲು ಕೊಡುತ್ತಿತ್ತು. ಹೀಗಿದ್ದ ಮರದ ಮೇಲೆ ಸಿಪಿಎಂ ಪಕ್ಷದ ಪಂಚಾಯತ್ ಉಪಾಧ್ಯಕ್ಷ ವಿ.ಟಿ. ಪ್ರತಾಪನ್ ಕಣ್ಣು ಬಿದ್ದಿದೆ. ತನ್ನ ಮನೆ ನಿರ್ಮಾಣಕ್ಕೆ ಸಹಾಯವಾಗುತ್ತದೆ ಎಂದು ಹಲಸಿನ ಮರವನ್ನೇ ಕಡಿದಿದ್ದಾರೆ.
ಶಾಲೆಯ ಸೊತ್ತಾಗಿದ್ದ ಮರವನ್ನು ಪಂಚಾಯತ್ ಉಪಾಧ್ಯಕ್ಷ ಕಡಿದಿರುವುದು ಸ್ವಾಭಾವಿಕವಾಗಿಯೇ ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಸಾರ್ವಜನಿಕರು ಸಿಪಿಎಂ ಪಕ್ಷದ ಕಚೇರಿಗೆ ತೆರಳಿ ದೂರು ನೀಡಿದ್ದರು. ಕೂಡಲೇ ಕ್ರಮ ಕೈಗೊಂಡ ಪಕ್ಷದ ಹಿರಿಯರು ಪಂಚಾಯತ್ ಉಪಾಧ್ಯಕ್ಷ ವಿ.ಟಿ. ಪ್ರತಾಪನ್ ಅವರನ್ನು ತನ್ನ ಸಮಿತಿಯಿಂದಲೇ ಕೆಳಗಿಳಿಸಿದೆ.
ಇದಷ್ಟೇ ಅಲ್ಲದೇ ಅರಣ್ಯ ಇಲಾಖೆಗೆ ದೂರು ನೀಡಲಾಗಿದ್ದು, ಈ ಕುರಿತು ವಿಚಾರಣೆ ನಡೆಸಲು ದ್ವಿಸದಸ್ಯ ಆಯೋಗವನ್ನು ರಚಿಸಲಾಗಿತ್ತು. ಇದೀಗ ತನಿಖೆಯಿಂದ ಪ್ರತಾಪನ್ ಶಾಲೆಯಲ್ಲಿರುವ ಹಲಸಿನ ಮರವನ್ನು ಮನೆ ನಿರ್ಮಾಣಕ್ಕೆ ಬಳಸಿಕೊಂಡಿರುವುದು ಪತ್ತೆಯಾಗಿದೆ.
ಹಲಸಿನ ಮರದ ಕೊಂಬೆಗಳು ಬಾಗಿಕೊಂಡಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯುಂಟಾಗುವ ಸಾಧ್ಯತೆ ಇತ್ತು. ಮುನ್ನೆಚ್ಚರಿಕೆಯ ದೃಷ್ಟಿಯಿಂದ ಮರದ ಕೊಂಬೆಗಳನ್ನು ಕಡಿಯಲು ಶಾಲಾ ಆಡಳಿತ ಮಂಡಳಿ ನಿರ್ಧರಿಸಿತ್ತು. ಇದಕ್ಕಾಗಿ ಶಾಲಾ ಪ್ರಾಧಿಕಾರವು ಪಂಚಾಯತ್ನ್ನು ಸಂಪರ್ಕಿಸಿದಾಗ ಪ್ರತಾಪನ್ ಕ್ರಮಕೈಗೊಳ್ಳಲು ಮುಂದಾಗಿದ್ದಾರೆ. ಆದರೆ ಮರದ ಕೊಂಬೆಗಳನ್ನು ಮಾತ್ರ ಕಡಿಯಬೇಕಿದ್ದ ಪ್ರತಾಪನ್, ಮರವನ್ನೇ ಕಡಿದು ತನ್ನ ಉಪಯೋಗಕ್ಕೆ ಬಳಸಿಕೊಂಡಿದ್ದಾರೆ.