ಇಂದೋರ್ : ಮಧ್ಯಪ್ರದೇಶದಲ್ಲಿ ಐದನೇ ದಿನಕ್ಕೆ ಕಾಲಿಟ್ಟಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ 'ಭಾರತ್ ಜೋಡೊ' ಯಾತ್ರೆಯು ಭಾನುವಾರ ಇಂದೋರ್‌ಗೆ ತಲುಪಿದೆ.
ಯಾತ್ರೆಯಲ್ಲಿ ಸಮಾಜದ ವಿವಿಧ ವರ್ಗಗಳ ಜನರು ಪಾಲ್ಗೊಂಡಿದ್ದರು.
ಯಾತ್ರೆಯಲ್ಲಿ ಭಾಗಿಯಾಗಿದ್ದ ಮನೋಹರ್ ಎಂಬ ಅಂಗವಿಕಲನ ಗಾಲಿಕುರ್ಚಿಯನ್ನು ರಾಹುಲ್ ಗಾಂಧಿ ಅವರು ಸ್ವಲ್ಪ ದೂರದವರೆಗೆ ತಳ್ಳುತ್ತಾ ಯಾತ್ರೆ ಮುಂದುವರಿಸಿದ ದೃಶ್ಯ ಕಂಡುಬಂದಿತು. ಈ ವೇಳೆ, 'ದೇಶಕ್ಕೆ ಈಗ ಬದಲಾವಣೆಯ ಅಗತ್ಯವಿದೆ ಎಂಬುದಾಗಿ ರಾಹುಲ್ ಅವರಿಗೆ ಹೇಳಿದ್ದೇನೆ' ಎಂದು ಮನೋಹರ್ ತಿಳಿಸಿದರು.
ಯಾತ್ರೆಯು ಶನಿವಾರ ರಾತ್ರಿ ಮಹೂ ತಲುಪಿತ್ತು. ಭಾನುವಾರ ರಾವೂ ಮೂಲಕ ಇಂದೋರ್ ತಲುಪಿತು. 'ಭಾರತ್ ಜೋಡೊ ಯಾತ್ರೆ ಹಿನ್ನೆಲೆಯಲ್ಲಿ ಭದ್ರತೆಗಾಗಿ ನಗರದಾದ್ಯಂತ 1,400 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು, ವಿವಿಧೆಡೆ ಬ್ಯಾರಿಕೇಡ್‌ಗಳನ್ನೂ ಹಾಕಲಾಗಿತ್ತು' ಎಂದು ಇಂದೋರ್ ಪೊಲೀಸ್ ಕಮಿಷನರ್ ಎಚ್.ಸಿ. ಮಿಶ್ರಾ ಹೇಳಿದರು.
'ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ರಾಜವಾಡದ 12 ಮನೆಗಳು ಹಾಗೂ ಬೀದಿಗಳನ್ನು ತಾತ್ಕಾಲಿಕವಾಗಿ ಖಾಲಿ ಮಾಡಿಸಲಾಗಿದೆ' ಎಂದೂ ಅವರು ಹೇಳಿದರು.
ಭಾರತ್ ಯಾತ್ರೆ ವೇಳೆ ಬಾಂಬ್ ಸ್ಫೋಟಿಸುವುದಾಗಿ ನವೆಂಬರ್ 17ರಂದು ಇಂದೋರ್‌ನ ಜುನಿ ಪ್ರದೇಶದಲ್ಲಿರುವ ಸಿಹಿ ತಿನಿಸುಗಳ ಅಂಗಡಿಯೊಂದಕ್ಕೆ ಅನಾಮಧೇಯ ಪತ್ರ ಬಂದಿತ್ತು. ಈ ಪತ್ರದಲ್ಲಿ 1984ರ ಸಿಖ್ ವಿರೋಧಿ ಗಲಭೆಯನ್ನು ಉಲ್ಲೇಖಿಸಿ, ರಾಹುಲ್ ಅವರನ್ನು ಹತ್ಯೆ ಮಾಡುವುದಾಗಿಯೂ ಉಲ್ಲೇಖಿಸಲಾಗಿತ್ತು. ಬಳಿಕ, ಈ ಘಟನೆಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದರು.