ನವದೆಹಲಿ: ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಮುಂದಿನ ವರ್ಷ ಏಪ್ರಿಲ್-ಮೇನಲ್ಲಿ ನಡೆಯಲಿರುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯೇ (ನೀಟ್) ಕೊನೆಯ ನೀಟ್ ಆಗುವ ಸಾಧ್ಯತೆ ಇದೆ.
ನಂತರ, ನೀಟ್ ಬದಲಿಗೆ 'ರಾಷ್ಟ್ರೀಯ ನಿರ್ಗಮನ ಪರೀಕ್ಷೆ' (ಎನ್‌ಇಎಕ್ಸ್‌ಟಿ) ನಡೆಯಲಿದೆ.
ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು ಎನ್‌ಇಎಕ್ಸ್‌ಟಿಯಲ್ಲಿ ಪಡೆಯುವ ಅಂಕಗಳ ಆಧಾರದಲ್ಲಿ ಅವರಿಗೆ ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶ ನೀಡಲಾಗುತ್ತದೆ.
'ಸೋಮವಾರ ನಡೆದ ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‌ಎಂಸಿ) ಉನ್ನತಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿದೆ. ಮುಂದಿನ ವರ್ಷ ಡಿಸೆಂಬರ್‌ನಲ್ಲಿ ರಾಷ್ಟ್ರೀಯ ನಿರ್ಗಮನ ಪರೀಕ್ಷೆ ನಡೆಸಲು ಉದ್ದೇಶಿಸಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಎನ್‌ಎಂಸಿ ಮಾಹಿತಿ ನೀಡಿದೆ' ಎಂದು ಅಧಿಕೃತ ಮೂಲಗಳು ಬುಧವಾರ ಹೇಳಿವೆ.
ಒಂದು ವೇಳೆ, ಮುಂದಿನ ಡಿಸೆಂಬರ್‌ನಲ್ಲಿ ಎನ್‌ಇಎಕ್ಸ್‌ಟಿ ನಡೆದರೆ, 2019-2020ನೇ ಬ್ಯಾಚ್‌ನ ಎಂಬಿಬಿಎಸ್ ವಿದ್ಯಾರ್ಥಿಗಳು ಈ ಪರೀಕ್ಷೆ ತೆಗೆದುಕೊಳ್ಳಬೇಕಾಗುತ್ತದೆ. ಅಲ್ಲದೇ, 2024-25ನೇ ಸಾಲಿನ ವೈದ್ಯಕೀಯ ಪಿಜಿ ಕೋರ್ಸ್‌ಗಳ ಪ್ರವೇಶಕ್ಕೆ ಕೂಡ ಈ ಎನ್‌ಇಎಕ್ಸ್‌ಟಿ ಫಲಿತಾಂಶವನ್ನೇ ಪರಿಗಣಿಸಲಾಗುತ್ತದೆ ಎಂದು ಇವೇ ಮೂಲಗಳು ಹೇಳಿವೆ.
ಭಾರತದಲ್ಲಾಗಲಿ ಅಥವಾ ವಿದೇಶಗಳಲ್ಲಿ ವೈದ್ಯಕೀಯ ಪದವಿ ಪಡೆದ ವಿದ್ಯಾರ್ಥಿಗಳಿಗೆಲ್ಲರಿಗೂ ರಾಷ್ಟ್ರೀಯ ನಿರ್ಗಮನ ಪರೀಕ್ಷೆ ಒಂದೇ ಆಗಿರುತ್ತದೆ. ಹೀಗಾಗಿ ವಿದೇಶಗಳಲ್ಲಿನ ಶೈಕ್ಷಣಿಕ ಸಂಸ್ಥೆಗಳಲ್ಲಿ ಅಧ್ಯಯನ ಮಾಡಿರುವವರು ಎದುರಿಸುತ್ತಿರುವ ಸಮಸ್ಯೆಗೆ ಎನ್‌ಇಎಕ್ಸ್‌ಟಿಯಿಂದ ಪರಿಹಾರ ಸಿಗಲಿದೆ ಎಂಬುದು ಗಮನಾರ್ಹ.