ನವದೆಹಲಿ: ಬೀದಿ ನಾಯಿಗಳಿಗೆ ಆಹಾರ ನೀಡುವವರು ಕಡ್ಡಾಯವಾಗಿ ಅವುಗಳನ್ನು ದತ್ತು ತೆಗೆದುಕೊಳ್ಳಬೇಕು ಅಥವಾ ನಾಯಿಗಳ ಆಶ್ರಯ ಮನೆಯಲ್ಲಿ ಅವುಗಳನ್ನು ಇಟ್ಟು ಖರ್ಚು ಭರಿಸಬೇಕು ಎಂದು ಬಾಂಬೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಬುಧವಾರ ವಜಾಗೊಳಿಸಿದೆ.
ಇದೇ ವೇಳೆ, ಸಾರ್ವಜನಿಕರು ಬೀದಿ ನಾಯಿಗಳಿಗೆ ಆಹಾರ ನೀಡಲು ನಿರ್ದಿಷ್ಟ ಸ್ಥಳವನ್ನು ನಿಗದಿಪಡಿಸಬೇಕು ಎಂದು ನಾಗ್ಪುರ ಪಾಲಿಕೆಗೆ ಸುಪ್ರೀಂಕೋರ್ಟ್ ಸೂಚಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ 'ನಾಯಿಗಳಿಗೆ ಆಹಾರ ನೀಡುವವರು ಕಡ್ಡಾಯವಾಗಿ ಅವುಗಳನ್ನು ದತ್ತು ತೆಗೆದುಕೊಳ್ಳಬೇಕು ಎಂದು ಹೇಳಲು ಸಾಧ್ಯವಿಲ್ಲ. ಮುಂದಿನ ವಿಚಾರಣೆವರೆಗೂ ಬೀದಿ ನಾಯಿಗಳಿಗೆ ಆಹಾರ ಹಾಕುವವರ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸುವಂತಿಲ್ಲ. ಸಾರ್ವಜನಿಕರು ಸಹ ನಾಯಿಗಳಿಗೆ ಆಹಾರ ನೀಡುವ ವೇಳೆ ಇತರರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದೆ.
ಹಾಗೆಯೇ ಬಾಂಬೆ ಹೈಕೋರ್ಟ್ ಆದೇಶದ ಕುರಿತು ಪ್ರತಿಕ್ರಿಯೆ ನೀಡುವಂತೆ ನಾಗ್ಪುರ ಪಾಲಿಕೆ ಮತ್ತು ಭಾರತದ ಪ್ರಾಣಿಗಳ ಕಲ್ಯಾಣ ಮಂಡಳಿಯನ್ನು ಕೇಳಿದೆ.
ನಾಗ್ಪುರ ಮತ್ತು ಸುತ್ತಮುತ್ತಲಿನ ಸಾರ್ವಜನಿಕ ಪ್ರದೇಶದದಲ್ಲಿ ಬೀದಿ ನಾಯಿಗಳಿಗೆ ಆಹಾರ ಹಾಕುವವರು ಕಡ್ಡಾಯವಾಗಿ ಅವುಗಳನ್ನು ದತ್ತು ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಪ್ರತಿ ತಪ್ಪಿಗೆ ₹200 ದಂಡವಿಧಿಸಬಹುದು ಎಂದು ಅ.20ರಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿತ್ತು.