ನವದೆಹಲಿ : ಭ್ರಷ್ಟರು ದೇಶ ನಾಶ ಮಾಡುತ್ತಿದ್ದಾರೆ ಮತ್ತು ಅವರು ಹಣದ ಸಹಾಯದಿಂದ ಭ್ರಷ್ಟಾಚಾರದಿಂದ ಪಾರಾಗುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
ಎಲ್ಗಾರ್ ಪರಿಷದ್-ಮಾವೊವಾದಿ ಸಂಪರ್ಕ ಪ್ರಕರಣದಲ್ಲಿ ತಮ್ಮನ್ನು ನ್ಯಾಯಾಂಗ ಬಂಧನದಲ್ಲಿರಿಸುವ ಬದಲು ಗೃಹಬಂಧನದಲ್ಲಿರಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಗೌತಮ್ ನವ್ಲಾಖಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಮೌಖಿಕ ಹೇಳಿಕೆ ನೀಡಿದೆ.
ಅವರ ಮನವಿಯನ್ನು ವಿರೋಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು, 'ನವ್ಲಾಖಾ ಅವರಂತಹ ಜನರು ದೇಶ ನಾಶಪಡಿಸಲು ಬಯಸುತ್ತಾರೆ. ಅವರ ಸಿದ್ಧಾಂತವು ಆ ರೀತಿಯದ್ದಾಗಿದೆ. ಅವರು ಮುಗ್ಧ ಜನರು ಎಂದಲ್ಲ. ಅವರು ನಿಜವಾದ ಯುದ್ಧದಲ್ಲಿ ತೊಡಗಿರುವ ವ್ಯಕ್ತಿಗಳು' ಎಂದು ಹೇಳಿದರು.
ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಹೃಷಿಕೇಶ್ ರಾಯ್ ಪೀಠ, 'ಈ ದೇಶವನ್ನು ಯಾರು ನಾಶಪಡಿಸುತ್ತಿದ್ದಾರೆಂದು ತಿಳಿಯಲು ಬಯಸುವಿರಾ? ಭ್ರಷ್ಟರಾಗಿರುವ ಜನರು. ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳುವವರು ಯಾರು?' ಎಂದು ಪ‍್ರಶ್ನಿಸಿತು.
'ಚುನಾಯಿತ ಪ್ರತಿನಿಧಿಗಳನ್ನು ಖರೀದಿಸಲು ಜನರು ಕೋಟ್ಯಂತರ ರೂಪಾಯಿ ಬಗ್ಗೆ ಮಾತನಾಡುವ ವಿಡಿಯೊವನ್ನು ನೋಡಿದ್ದೇವೆ. ಅವರು ದೇಶದ ವಿರುದ್ಧ ಏನನ್ನೂ ಮಾಡುತ್ತಿಲ್ಲ ಎಂದು ಹೇಳುತ್ತೀರಾ? ತಡೆಯದಿದ್ದರೆ ಅವರು ಸಂತೋಷದಿಂದ ಮುಂದುವರಿಯುತ್ತಾರೆ. ಅವರು ತಪ್ಪಿಸಿಕೊಳ್ಳಲು ಸಹಾಯ ಮಾಡುವ ಹಣದ ಚೀಲಗಳಿವೆ' ಎಂದು ಹೇಳಿದೆ.
ಭ್ರಷ್ಟರನ್ನು ಸಮರ್ಥಿಸುತ್ತಿಲ್ಲ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಹೇಳಿದರು. ಗೃಹಬಂಧನದ ಕೋರಿಕೆ ಅನುಮತಿಸಿದರೆ ನವ್ಲಾಖಾಗೆ ಯಾವ ಷರತ್ತುಗಳನ್ನು ವಿಧಿಸಬಹುದು ಎಂಬ ಬಗ್ಗೆ ಸೂಚನೆಗಳನ್ನು ಪಡೆಯಲು ಮತ್ತು ಅದನ್ನು ತಿಳಿಸುವಂತೆ ರಾಜು ಅವರಿಗೆ ಕೋರ್ಟ್ ಕೇಳಿದೆ.
'ಕನಿಷ್ಠ ಸ್ವಲ್ಪ ಸಮಯದವರೆಗೆ ನೋಡೋಣ. ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಏನೂ ಆಗದಂತೆ ನೀವು ಪರಿಶೀಲಿಸಿಕೊಂಡು ಬನ್ನಿ. ಅವರು ಏನಾದರೂ ಮಾಡಿದರೆ, ತಮ್ಮ ಸ್ವಾತಂತ್ರ್ಯ ಕಳೆದುಕೊಳ್ಳುತ್ತಾರೆ. ಅವರು ಹಲವಾರು ಸಮಸ್ಯೆಗಳನ್ನು ಹೊಂದಿದ್ದಾರೆ' ಎಂದು ಪೀಠ ಹೇಳಿದೆ
ನವ್ಲಾಖಾ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ವೈದ್ಯಕೀಯ ವರದಿಗಳು ಅವರಿಗೆ ಜೈಲಿನಲ್ಲಿ ಚಿಕಿತ್ಸೆ ನೀಡುವ ಸಾಧ್ಯತೆ ಇಲ್ಲ ಎಂದು ತೋರಿಸುತ್ತವೆ ಎಂದು ಹೇಳಿದರು.