ತಿರುವನಂತಪುರ/ನವದೆಹಲಿ: 'ವಿಧಾನಸಭೆ ಅಧಿವೇಶನ ಕರೆದಿರುವುದರಿಂದ ತಮ್ಮನ್ನು ವಿಶ್ವವಿದ್ಯಾಲಯಗಳ ಕುಲಾಧಿಪತಿ ಹುದ್ದೆಯಿಂದ ವಜಾಗೊಳಿಸುವ ಸಂಬಂಧ ಕೇರಳ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಗೆ ಯಾವುದೇ ಮಹತ್ವವಿಲ್ಲ' ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಬುಧವಾರ ಹೇಳಿದ್ದಾರೆ.
'ಒಮ್ಮೆ ಅಧಿವೇಶನ ಕರೆದರೆ, ಅದಕ್ಕೂ ಮುನ್ನ ರಾಜಭವನಕ್ಕೆ ಕಳುಹಿಸಿರುವ ಯಾವ ಸುಗ್ರೀವಾಜ್ಞೆಗೂ ಮಹತ್ವ ಇರುವುದಿಲ್ಲ' ಎಂದಿದ್ದಾರೆ.
ರಾಜಭವನಕ್ಕೆ ಬರುವ ಅತಿಥಿಗಳಿಗಾಗಿ ಹೆಚ್ಚುವರಿ ವಾಹನ ಒದಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಿರುವ ಕುರಿತು ನವದೆಹಲಿಯಲ್ಲಿ ಪ್ರತಿಕ್ರಿಯಿಸಿರುವ ಅವರು, 'ರಾಜಭವನಕ್ಕೆ ಹೆಚ್ಚುವರಿ ಅತಿಥಿಗಳು ಬಂದಾಗ ಹೆಚ್ಚುವರಿ ವಾಹನ ಒದಗಿಸುವಂತೆ ಸರ್ಕಾರವನ್ನು ಕೇಳಬೇಕಾಗುತ್ತದೆ. ಅದರಲ್ಲಿ ವಿಶೇಷ ಏನಿದೆ. ರಾಜ್ಯಪಾಲರ ಭೇಟಿಗೆ ಬರುವವರನ್ನು ನಡೆದುಕೊಂಡು ಬನ್ನಿ ಎಂದು ಹೇಳಬೇಕೇ' ಎಂದು ಪ್ರಶ್ನಿಸಿದ್ದಾರೆ.
ಹಂಗಾಮಿ ಕುಲಪತಿ ನೇಮಕ: ಕೆ.ರಿಜಿ ಜಾನ್ ಅವರನ್ನು ಮೀನುಗಾರಿಕೆ ಮತ್ತು ಸಾಗರ ಅಧ್ಯಯನಗಳ ವಿಶ್ವವಿದ್ಯಾಲಯದ (ಕೆಯುಎಫ್‌ಒಎಸ್) ಕುಲಪತಿಯನ್ನಾಗಿ ನೇಮಿಸಿದ್ದ ಕೇರಳ ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದ ಬೆನ್ನಲ್ಲೇ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಕೆಯುಎಫ್‌ಒಎಸ್‌ನ ಪ್ರಾಧ್ಯಾಪಕ ಎಂ.ರೋಸಾಲಿಂಡ್ ಜಾರ್ಜ್ ಅವರನ್ನು ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿಯನ್ನಾಗಿ ನೇಮಿಸಿದ್ದಾರೆ.