ತಿರುವನಂತಪುರಂ: ಫುಟ್‌ಬಾಲ್ ಅಭಿಮಾನದ ಭರದಲ್ಲಿ ಭಾರತದ ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ಇತರೆ ರಾಷ್ಟ್ರಗಳ ಧ್ವಜವನ್ನು ಹಾರಿಸುವುದು ಸಲ್ಲ ಎಂದು ಕೇರಳದ ಸುನ್ನಿ ಮುಸಲ್ಮಾನ ಸಂಘಟನೆಯೊಂದು ಹೇಳಿದೆ.
ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ ಸಂಘಟನೆಯ ಅಧೀನದಲ್ಲಿ ಕಾರ್ಯನಿರ್ವಹಿಸುವ ಖುತ್‌ಬಾ ಸಮಿತಿಯ ಕಾರ್ಯದರ್ಶಿ ನಾಸಿರ್ ಫೈಝಿ ಕೂಡತ್ತಾಯಿ ಅವರು ಹೀಗೆ ಹೇಳಿದ್ದಾರೆ.
'ಫುಟ್‌ಬಾಲ್ ಅಭಿಮಾನದ ಭರದಲ್ಲಿ ಭಾರತದ ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ಇತರೆ ರಾಷ್ಟ್ರಗಳ ಧ್ವಜವನ್ನು ಹಾರಿಸಕೂಡದು. ಹಲವು ದೇಶಗಳನ್ನು ವಸಾಹತುಗಳನ್ನಾಗಿ ಮಾಡಿಕೊಂಡ ಪೋರ್ಚುಗಲ್‌ನ ಧ್ವಜವನ್ನು ಹಾರಿಸುವುದು ಸರಿಯಲ್ಲ' ಎಂದು ನಾಸಿರ್ ಫೈಝಿ ಹೇಳಿದ್ದಾರೆ.
ಅಲ್ಲದೇ ಫುಟ್‌ಬಾಲ್ ತಾರೆಗಳಾದ ಲಯೊನೆಲ್ ಮೆಸ್ಸಿ, ಕ್ರಿಸ್ಟಿಯಾನೋ ರೊನಾಲ್ಡೊ, ನೇಮರ್ ಜೂನಿಯರ್ ಮುಂತಾದವರ ಕಟೌಟ್ ನಿಲ್ಲಿಸಲು ಭರಪೂರ ಹಣ ಖರ್ಚು ಮಾಡುವುದರ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅವರು, ಫುಟ್‌ಬಾಲ್ ಆಟಗಾರರನ್ನು ಆರಾಧಿಸುವುದು ಇಸ್ಲಾಮಿನ ಆಚರಣೆಗೆ ವಿರುದ್ಧ ಎಂದು ನುಡಿದಿದ್ದಾರೆ.
ಫುಟ್‌ಬಾಲ್ ತಾರೆಗಳ ಕಟೌಟ್ ನಿಲ್ಲಿಸಲು ಬಡವರು ಸಾವಿರಾರು ರೂಪಾಯಿ ಪೋಲು ಮಾಡುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಫುಟ್‌ಬಾಲ್ ವಿಶ್ವಕಪ್‌ನಿಂದಾಗಿ ವಿದ್ಯಾರ್ಥಿಗಳು ಕಲಿಕೆಯಲ್ಲಿ ಉತ್ಸಾಹವನ್ನು ಕಳೆದುಕೊಳ್ಳುತ್ತಿದ್ದಾರೆ. ಫುಟ್‌ಬಾಲ್‌ಗೆ ಜನ ದಾಸರಾಗುತ್ತಿದ್ದು, ಇದು ಸರಿಯಾದ ಬೆಳವಣಿಗೆ ಅಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ತನ್ನ ಸಂಸ್ಥೆ ಫುಟ್‌ಬಾಲ್‌ಗೆ ವಿರುದ್ಧ ಅಲ್ಲ ಎಂದು ಹೇಳಿರುವ ಅವರು, ಅದನ್ನು ಕ್ರೀಡೆಯಾಗಿಯಷ್ಟೇ ನೋಡಬೇಕು. ಕ್ರೀಡಾಸ್ಫೂರ್ತಿಯಿಂದ ನಡೆದುಕೊಳ್ಳಬೇಕು. ದೈಹಿಕ ಚಟುವಟಿಕೆಯಾಗಿ ಅದನ್ನು ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಕೇರಳಿಗರಲ್ಲಿ ತುಸು ಹೆಚ್ಚು ಎಂದು ಹೇಳಬಹುದಾದ ಫುಟ್‌ಬಾಲ್ ಅಭಿಮಾನ ಇದ್ದು, ಫುಟ್‌ಬಾಲ್ ಆರಾಧಕರು ರಾಜ್ಯದುದ್ದಕ್ಕೂ ತಮ್ಮ ನೆಚ್ಚಿನ ತಾರೆಯರ ಕಟೌಟ್ ನಿಲ್ಲಿಸಿದ್ದಾರೆ. ವಿದ್ಯಾರ್ಥಿಗಳು ಶಾಲೆಗಳಿಗೆ ರಜೆ ಮಾಡಿ ಪಂದ್ಯ ವೀಕ್ಷಣೆ ಮಾಡಿದ ಪ್ರಕರಣಗಳು ಕೂಡ ವರದಿಯಾಗಿದೆ.