ಕೊಚ್ಚಿ: ಎಂಆರ್ಐ ಸ್ಕ್ಯಾನಿಂಗ್ (MRI scanning) ಮಾಡಿಸಲು ಬರುತ್ತಿದ್ದ ಮಹಿಳೆಯರು, ಬಟ್ಟೆ ಬದಲಾಯಿಸುವುದನ್ನು ಮೊಬೈಲ್ (Mobile) ಕ್ಯಾಮೆರಾದಲ್ಲಿ ರಹಸ್ಯವಾಗಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ರೇಡಿಯಾಲಜಿಸ್ಟ್ (Radiologist)ನನ್ನು ಬಂಧಿಸಲಾಗಿದೆ.
ಅಂಜಿತ್ ಅಲಿಯಾಸ್ ನಂದು (24) ಬಂಧಿತ ರೇಡಿಯಾಲಜಿಸ್ಟ್. ಪತ್ತನಂತಿಟ್ಟ ಜಿಲ್ಲೆಯ ಆಡೂರ್ ಪಟ್ಟಣದಲ್ಲಿ ಜನರಲ್ ಆಸ್ಪತ್ರೆ ಬಳಿ ಇರುವ ದೇವಿ ಸ್ಕ್ಯಾನಿಂಗ್ ಸೆಂಟರ್ನಲ್ಲಿ ಈತ ರೇಡಿಯಾಲಜಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಎಝಂಕುಲಂ ನಿವಾಸಿ ನೀಡಿದ ದೂರಿನ ಆಧಾರದ ಮೇಲೆ ರಂಜಿತ್ನನ್ನು ಬಂಧಿಸಲಾಗಿದೆ. ಈ ಸುದ್ದಿ ಹೊರಗಡೆ ಬಾರದಂತೆ ತಡೆಯಲು ಲ್ಯಾಬ್ ಆಡಳಿತ ಮಂಡಳಿ ಸಾಕಷ್ಟು ಪ್ರಯತ್ನ ಮಾಡಿದೆ. ಅಲ್ಲದೆ, ಮಹಿಳೆಗೆ ಹಣದ ಆಮಿಷವನ್ನು ಒಡ್ಡಿದೆ. ಆದರೆ, ಇದ್ಯಾವುದಕ್ಕೂ ಜಗ್ಗದ ಮಹಿಳೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿ, ಆರೋಪಿಯನ್ನು ಕಂಬಿ ಹಿಂದೆ ತಳ್ಳಿದ್ದಾಳೆ.
ಕೇವಲ ಕ್ಯಾಮೆರಾ (Mobile phone camera) ಮಾತ್ರ ಕಾಣುವಂತೆ ಮೊಬೈಲ್ಗೆ ಬಟ್ಟೆ ಸುತ್ತಿ ಕೋಣೆಯ ಕಪ್ಬೋರ್ಡ್ನಲ್ಲಿ ಇಡುತ್ತಿದ್ದ. ಬಟ್ಟೆ ಬದಲಾಯಿಸಲು ಬಂದ ಮಹಿಳೆಗೆ ಅನುಮಾನ ಬಂದು ಪರಿಶೀಲನೆ ನಡೆಸಿದಾಗ ಮೊಬೈಲ್ ಇರುವುದು ಪತ್ತೆಯಾಗಿದೆ. ತಕ್ಷಣ ರೆಕಾರ್ಡ್ ಆಗಿ ದೃಶ್ಯಗಳನ್ನು ಡಿಲೀಟ್ ಮಾಡಿ, ಈ ಬಗ್ಗೆ ಲ್ಯಾಬ್ನಲ್ಲಿ ಜೋರು ಗಲಾಟೆ ಮಾಡಿದ್ದಾರೆ. ಈ ವೇಳೆ ಆರೋಪಿ ರಂಜಿತ್ ಓಡಿ ಬಂದು ಮಹಿಳೆಯಿಂದ ಮೊಬೈಲ್ ಕಿತ್ತುಕೊಂಡಿದ್ದಾನೆ. ಅಷ್ಟರಲ್ಲಿ ಇತರೆ ಮಂದಿ ಕೂಡ ಅಲ್ಲಿಗೆ ಎಂಟ್ರಿ ಕೊಟ್ಟಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿ ಆತನನ್ನು ಹಿಡಿದುಕೊಟ್ಟಿದ್ದಾರೆ.
ಮೊಬೈಲ್ ಪಡೆದು ಪರಿಶೀಲಿಸಿದಾಗ ಮಹಿಳೆಯರ 8 ಬೆತ್ತಲೆ ವಿಡಿಯೋಗಳು ಪತ್ತೆಯಾಗಿವೆ. ಈ ಪ್ರಕರಣದ ಬಗ್ಗೆ ಮಾತನಾಡಿರುವ ಡಿವೈಎಸ್ಪಿ ಬಿನು, ಮೊಬೈಲ್ ಅನ್ನು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಿ, ಇತರೆ ದೃಶ್ಯಗಳು ಡಿಲೀಟ್ ಆಗಿದೆಯೇ ಎಂಬುದನ್ನು ಪತ್ತೆ ಹಚ್ಚಲಾಗುವುದು ಎಂದು ತಿಳಿಸಿದ್ದಾರೆ.
ಡಿವೈಎಫ್‌ಐ, ಯೂತ್ ಕಾಂಗ್ರೆಸ್ ಮತ್ತು ಬಿಜೆಪಿ ಪ್ರತಿಭಟನೆ ಹಿನ್ನೆಲೆಯಲ್ಲಿ ಲ್ಯಾಬ್ ಅನ್ನು ಮುಚ್ಚಲಾಗಿದೆ.