ನವದೆಹಲಿ: ಅತ್ಯಂತ ಕಠಿಣ ವೃತ್ತಿಗಳಲ್ಲಿ ವನ್ಯಜೀವಿ ಛಾಯಾಗ್ರಹಣವೂ ಒಂದು. ಅತ್ಯಂತ ಶ್ರಮ ಮತ್ತು ಏಕಾಗ್ರತೆ ಮೈಗೂಡಿಸಿಕೊಂಡರೆ ಮಾತ್ರ ವೈಲ್ಡ್ಲೈಫ್ ಫೋಟೋಗ್ರಫಿಯಲ್ಲಿ ವೈಭವದ ದೃಶ್ಯಗಳನ್ನು ಸೆರೆಹಿಡಿಯಲು ಸಾಧ್ಯವಾಗುತ್ತದೆ. ಇದಕ್ಕಾಗಿ ಕಾಡಿನಲ್ಲೇ ಸಾಕಷ್ಟು ಸಮಯವನ್ನು ವ್ಯಯಿಸಬೇಕಾಗುತ್ತದೆ.
ವನ್ಯ ಜೀವಿಗಳ ಚಲನವಲನವನ್ನು ಸೂಕ್ಷವಾಗಿ ಗಮನಿಸಿದಾಗ 'ವಾವ್' ಎಂದೆನಿಸುವಂತಹ ಫೋಟೋ ತೆಗೆಯಬಹುದು. ಇದೀಗ ಇಂತಹದ್ದೇ ಅದ್ಭುತ ಎಂದೆನಿಸುವ ಹಿಮ ಚಿರತೆಯ ವೈಲ್ಡ್ಲೈಫ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಅಮೇರಿಕಾ ಮೂಲದ ವನ್ಯಜೀವಿ ಛಾಯಾಗ್ರಾಹಕಿ ಕಿಟ್ಟಿಯಾ ಪಾವ್ಲೋವ್ಸ್ಕಿ(Kittiya Pawlowski) ಎಂಬಾಕೆ, ನೇಪಾಳದ ಹಿಮಾಲಯ ಶ್ರೇಣಿಯ ನಡುವೆ ಚಿರತೆಯೊಂದರ ಫೋಟೋ ಕ್ಲಿಕ್ಕಿಸಿದ್ದಾರೆ. ಇದೀಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅತ್ಯಂತ ಶೀತ ಪ್ರದೇಶದಲ್ಲಿ ಗಾಂಭೀರ್ಯದಿಂದ ಚಿರತೆಯೊಂದು ಉಸಿರಾಡುತ್ತಿರುವ ಫೋಟೋ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
ಈ ಚಿರತೆಯ ಫೋಟೋ ವನ್ಯಜೀವಿ ಛಾಯಾಗ್ರಾಹಕಿಗೆ ಸಾಕಷ್ಟು ಹರಸಾಹಸ ಪಟ್ಟ ಫಲದಿಂದ ಸಿಕ್ಕಿದೆ. ಛಾಯಾಗ್ರಾಹಕಿ ಕಿಟ್ಟಿಯಾ ಪಾವ್ಲೋವ್ಸ್ಕಿ(Kittiya Pawlowski) ಸುಮಾರು 165 ಕಿ.ಮೀನಷ್ಟು ಹಿಮಾವೃತ ಪ್ರದೇಶದಲ್ಲಿ ಚಾರಣ ಮಾಡಿದ್ದಾರೆ. ಹಿಮ ಚಿರತೆಯ ಫೋಟೋ ತೆಗೆಯಬೇಕೆಂಬ ಹಠದಿಂದ ಬೆಳಗ್ಗೆ 4 ಗಂಟೆಯಿಂದ ಚಾರಣ ಕೈಗೊಂಡಿದ್ದಾರೆ. ಈ ವೇಳೆ ಎತ್ತರದ ಪ್ರದೇಶದಲ್ಲಿ ಚಿರತೆಯ ಗಾಂಭೀರ್ಯದ ಫೋಟೋಗಳನ್ನು ಕ್ಲಿಕ್ಕಿಸಲು ಸಾಧ್ಯವಾಗಿದೆ.
'ಅಕ್ಟೋಬರ್ 9ರಂದು ಹುಣ್ಣಿಮೆಯ ದಿನವಾಗಿತ್ತು. ಈ ದಿನ ಚಂದ್ರನ ಬೆಳಕಿನಲ್ಲಿ ಹಿಮಾಲಯ ಸುಂದರವಾಗಿ ಕಾಣುತ್ತದೆ. ಇನ್ನು ಹಿಮ ಚಿರತೆಗಳು ಮುಂಜಾನೆ ಮತ್ತು ಸಂಜೆಯ ಹೊತ್ತಿನಲ್ಲಿ ಕಾಣಸಿಗುತ್ತವೆ. ಹೀಗಾಗಿ ನಾನು ಸಕಲ ಸಿದ್ಧತೆಯೊಂದಿಗೆ, ಚಿರತೆಯ ಫೋಟೋ ತೆಗೆಯಬೇಕೆಂಬ ಛಲದೊಂದಿಗೆ ಚಾರಣ ಆರಂಭಿಸಿದೆ. ಈ ವೇಳೆ ನನಗೆ ಹಿಮ ಚಿರತೆಯ ಅದ್ಭುತ ಚಿತ್ರಗಳನ್ನು ಸೆರೆಹಿಡಿಯಲು ಸಾಧ್ಯವಾಗಿದೆ' ಎಂದು ಛಾಯಾಗ್ರಾಹಕಿ ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.