ಐರ್ಲೆಂಡ್: ಉತ್ತಮ ವೇತನ ಕೊಟ್ಟು ನನ್ನನ್ನು ಖಾಲಿ ಕೂರಿಸಿದ್ದಾರೆ ಎಂದು ವ್ಯಕ್ತಿಯೊಬ್ಬ ಕಂಪನಿಯನ್ನೇ ಕೋರ್ಟ್‌ಗೆ ಎಳೆದ ವಿಕ್ಷಿಪ್ತ ಘಟನೆ ಐರ್ಲೆಂಡ್‌ನಲ್ಲಿ ನಡೆದಿದೆ.
'ಐರಿಷ್ ರೈಲ್'ನಲ್ಲಿ ಉದ್ಯೋಗಿಯಾಗಿರುವ ಡೆರ್ಮೋಟ್ ಅಲೆಸ್ಟರ್ ಮಿಲ್ಸ್ ಎಂಬಾತನೆ ಹೀಗೊಂದು ದೂರು ತೆಗೆದುಕೊಂಡು ಕೋರ್ಟ್ ಮೊರೆಹೋದ ವ್ಯಕ್ತಿ.
'ಐರಿಷ್ ರೈಲ್'ನಲ್ಲಿ ಹಣಕಾಸು ಅಧಿಕಾರಿಯಾಗಿರುವ ಮಿಲ್ಸ್‌ಗೆ ವಾರ್ಷಿಕ ₹ 1.03 ಕೋಟಿ ವೇತನ ಇದ್ದು, ತನಗೆ ಏನೂ ಕೆಲಸ ನೀಡದೇ ಸುಮ್ಮನೇ ಕೂರಿಸುತ್ತಾರೆ ಎನ್ನುವುದು ಆತನ ಅಳಲು.
'ಪ್ರತೀ ದಿನ 10 ಗಂಟೆಗೆ ಕಚೇರಿಗೆ ಹೋಗುತ್ತೇನೆ. ಎರಡು ದಿನಪತ್ರಿಕೆ ಹಾಗೂ ಸ್ಯಾಂಡ್‌ವಿಚ್ ಖರೀದಿ ಮಾಡುತ್ತೇನೆ. ನಂತರ ಪತ್ರಿಕೆ ಓದಿ, ಸ್ಯಾಂಡ್‌ವಿಚ್ ತಿಂದು ವಾಕಿಂಗ್ ಮಾಡುತ್ತೇನೆ. ಸುಮಾರು 10.30ರ ವೇಳೆಗೆ ಕೆಲಸ ಸಂಬಂಧ ಏನಾದರೂ ಮೇಲ್‌ಗಳಿದ್ದರೆ ಉತ್ತರಿಸುತ್ತೇನೆ' ಎಂದು ಕೋರ್ಟ್‌ಗೆ ಹೇಳಿದ್ದಾರೆ.
9 ವರ್ಷದ ಹಿಂದೆ ಕಂಪನಿಯ ಲೆಕ್ಕಾಚಾರದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ, ನನಗೆ ದಂಡ ವಿಧಿಸಿದ್ದರು. ಹೀಗಾಗಿ ನನಗೆ ಯಾವುದೇ ಕೆಲಸ ನೀಡದೇ ಸತಾಯಿಸುತ್ತಿದ್ದಾರೆ ಎನ್ನುವುದು ಮಿಲ್ಸ್ ಅಲವತ್ತುಕೊಂಡಿದ್ದಾರೆ.
ಅಲ್ಲದೇ ತನಗೆ ಸೂಕ್ತವಾದ ಕೆಲಸ ನೀಡಿದರೆ ಉತ್ಸಾಹದಿಂದ ಕೆಲಸ ಮಾಡುವುದಾಗಿ ಮಿಲ್ಸ್ ಕೋರ್ಟ್‌ಗೆ ಹೇಳಿದ್ದಾರೆ.