ಪಣಜಿ: ದೇಶದಲ್ಲಿ ಕಂಡುಬರುವ 900 ಪ್ರಮುಖ ಔಷಧೀಯ ಸಸ್ಯಗಳಲ್ಲಿ ಶೇ 10ರಷ್ಟು ಸಸ್ಯಗಳು ಅಳಿವಿನಂಚಿನಲ್ಲಿವೆ ಎಂದು 9ನೇ ವಿಶ್ವ ಆಯುರ್ವೇದ ಕಾಂಗ್ರೆಸ್ ಸಮಾವೇಶದಲ್ಲಿ ಛತ್ತೀಸ್‌ಗಢ ರಾಜ್ಯ ಔಷಧೀಯ ಮತ್ತು ಸುಗಂಧ ಸಸ್ಯಗಳ ಮಂಡಳಿ ಮುಖ್ಯಸ್ಥ ಜೆ.ಎ.ಸಿ.ಎಸ್.
ರಾವ್ ಹೇಳಿದ್ದಾರೆ.
ಶೇ 15ರಷ್ಟು ಔಷಧೀಯ ಸಸ್ಯಗಳನ್ನು ಮಾತ್ರ ಸ್ಥಳೀಯವಾಗಿ ಪಡೆಯುತ್ತಿದ್ದೇವೆ. ಪ್ರಮುಖ ಸಸ್ಯಗಳಿಗೆ ಕಾಡು ಮೂಲವಾಗಿದೆ. ಆದರೆ ಭೂಮಿ ಪ್ರತಿ 2 ವರ್ಷಕ್ಕೆ ಹೊಸದಾಗಿ ಹುಟ್ಟುವ ಔಷಧೀಯ ಗಿಡವನ್ನು ಕಳೆದುಕೊಳ್ಳುತ್ತಿದೆ. ಆತಂಕಕಾರಿ ವಿಷಯವೆಂದರೆ ನೈಸರ್ಗಿಕ ಚಟುವಟಿಕೆಗಿಂತ ಸಸ್ಯಗಳ ನಾಶ ನೂರು ಪಟ್ಟು ಹೆಚ್ಚಿದೆ. ಅತಿಯಾದ ಕಾಡಿನ ಬಳಕೆ, ಔಷಧಗಳ ತಯಾರಿಕೆಯ ನೆಪದಲ್ಲಿ ಕಾಡು ಪ್ರಾಣಿಗಳ ಹತ್ಯೆ ಮತ್ತು ಅವುಗಳ ಆವಾಸ ಸ್ಥಾನ ನಾಶ ಸೇರಿದಂತೆ ನಗರೀಕರಣ ಸಸ್ಯಗಳ ನಾಶಕ್ಕೆ ಪ್ರಮುಖ ಕಾರಣವಾಗಿದೆ ಎಂದು ಅವರು ಹೇಳಿದರು.
ಗೋವಾ ಜೀವವೈವಿದ್ಯ ಮಂಡಳಿಯ ಸದಸ್ಯ ಡಾ. ಪ್ರದೀಪ್ ವಿಠಲ್ ಮಾತನಾಡಿ, ದೇಶದಲ್ಲಿ 45 ಸಾವಿರ ಸಸ್ಯ ಪ್ರಭೇದಗಳಿವೆ, ಅವುಗಳಲ್ಲಿ 7,333ರಷ್ಟು ಔಷಧೀಯ ಬಳಕೆಯ ಸಸ್ಯಗಳಾಗಿವೆ. ಔಷಧ ತಯಾರಿಕೆಗೆ ಶೇ 85ರಷ್ಟು ಸಸ್ಯಗಳನ್ನು ಕಾಡಿನಿಂದಲೇ ಪಡೆಯುತ್ತೇವೆ, ಶೇ 15ರಷ್ಟನ್ನು ಬೆಳೆಯಲಾಗುತ್ತಿದೆ ಎಂದರು.