ನವದೆಹಲಿ: ಉದ್ಯಮಿಯೊಬ್ಬರಿಗೆ 10 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಮುಂಬೈನಲ್ಲಿ ಜಿಎಸ್‌ಟಿ ಸೂಪರಿಂಟೆಂಡೆಂಟ್‌ರನ್ನು ಸಿಬಿಐ ಬಂಧಿಸಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
1.25 ಕೋಟಿ ಲಯಬಿಲಿಟಿ ಇತ್ಯರ್ಥಪಡಿಸಲು ಜಿಎಸ್‌ಟಿ ಸೂಪರಿಂಟೆಂಡೆಂಟ್ ಬಿ ಸೋಮೇಶ್ವರ್ ರಾವ್ ಅವರು 20 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು ಆರೋಪಿಸಿ ಮುಂಬೈನಲ್ಲಿ ಸ್ಕ್ರ್ಯಾಪ್ ವ್ಯಾಪಾರಿ ಜಾಕಿರ್ ಹುಸೇನ್ ಶಾ ನೀಡಿದ ದೂರಿನ ಮೇರೆಗೆ ಸಿಬಿಐ ಕ್ರಮ ಕೈಗೊಂಡಿದೆ ಎಂದು ಅವರು ಹೇಳಿದ್ದಾರೆ.
ಲಂಚದ ಹಣ ನೀಡಲು ವಿಫಲವಾದರೆ ತಮ್ಮನ್ನು ಬಂಧಿಸುವುದಾಗಿ ರಾವ್ ಮತ್ತು ಇನ್ನೊಬ್ಬ ಅಧಿಕಾರಿ ಬೆದರಿಕೆ ಹಾಕಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ಅಲ್ಲದೆ ಡೀಲರ್‌ನ ಚಾರ್ಟರ್ಡ್ ಅಕೌಂಟೆಂಟ್ ಸಲ್ಲಿಸಲು ಬಯಸುವ ಹೆಚ್ಚುವರಿ ದಾಖಲೆಗಳನ್ನು ಸ್ವೀಕರಿಸಲು ಬಂಧಿತ ಆರೋಪಿಗಳು ನಿರಾಕರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಬಿಐ ಪ್ರಕಾರ, ದೂರುದಾರ ಹುಸೇನ್ ಶಾ ನಂತರ ಲಂಚದ ಹಣ ಕಡಿಮೆ ಮಾಡುವಂತೆ ರಾವ್‌ಗೆ ಮನವಿ ಮಾಡಿದ್ದರು. ಹೀಗಾಗಿ ರಾವ್ ಲಂಚವನ್ನು 9 ಲಕ್ಷಕ್ಕೆ ಇಳಿಸಿದ್ದರು. ಆದರೆ ಬೇಗ ಪಾವತಿ ಮಾಡದ ಹಿನ್ನೆಲೆಯಲ್ಲಿ ಅದನ್ನು 10 ಲಕ್ಷಕ್ಕೆ ಹೆಚ್ಚಿಸಿದ್ದರು.
ದೂರನ್ನು ಸ್ವೀಕರಿಸಿದ ನಂತರ, ಸಿಬಿಐ ಆರೋಪದ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದ್ದು, ಇದು ಮೇಲ್ನೋಟಕ್ಕೆ ನಿಜವೆಂದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.