ನವದೆಹಲಿ:ಅತ್ಯಂತ
ಕೆಟ್ಟ ವಾಯುಮಾಲಿನ್ಯವನ್ನು ಹೊಂದಿರುವ ವಿಶ್ವದ 10 ನಗರಗಳ ಪೈಕಿ ಒಂಭತ್ತು ದಕ್ಷಿಣ
ಏಶ್ಯಾದಲ್ಲಿಯೇ ಇವೆ ಎಂದು ವಿಶ್ವಬ್ಯಾಂಕ್ (World Bank)ವರದಿಯು ಹೇಳಿದೆ.
ವಾಯುಮಾಲಿನ್ಯವು ಪ್ರದೇಶದಲ್ಲಿ ಪ್ರತಿವರ್ಷ ಅಂದಾಜು 20 ಲಕ್ಷ ಅಕಾಲಿಕ ಸಾವುಗಳಿಗೆ
ಕಾರಣವಾಗುತ್ತಿದೆ ಎಂದು ಡಿ.14ರಂದು ಬಿಡುಗಡೆಗೊಂಡ 'ಶುದ್ಧ ಗಾಳಿಗಾಗಿ ಹೋರಾಟ: ದಕ್ಷಿಣ
ಏಶ್ಯಾದಲ್ಲಿ ವಾಯುಮಾಲಿನ್ಯ ಮತ್ತು ಜನಾರೋಗ್ಯ 'ವರದಿಯಲ್ಲಿ ವಿಶ್ವಬ್ಯಾಂಕ್ ಬೆಟ್ಟು
ಮಾಡಿದೆ.
ಬೃಹತ್
ಕೈಗಾರಿಕೆಗಳು,ವಿದ್ಯುತ್ ಸ್ಥಾವರಗಳು ಮತ್ತು ವಾಹನಗಳು ವಿಶ್ವಾದ್ಯಂತ ವಾಯುಮಾಲಿನ್ಯದ
ಪ್ರಮುಖ ಮೂಲಗಳಾಗಿವೆ, ಆದರೆ ದ.ಏಶ್ಯಾದಲ್ಲಿ ಇತರ ಮೂಲಗಳೂ ಗಣನೀಯ ಹೆಚ್ಚುವರಿ ಪಾಲನ್ನು
ಸಲ್ಲಿಸುತ್ತಿವೆ. ಅಡಿಗೆ ಮತ್ತು ಬಿಸಿ ಮಾಡುವುದಕ್ಕೆ ಘನ ಇಂಧನಗಳ ದಹನ,ಇಟ್ಟಿಗೆ
ಗೂಡುಗಳಂತಹ ಸಣ್ಣ ಕೈಗಾರಿಕೆಗಳಿಂದ ಹೊರಸೂಸುವಿಕೆ,ಮುನ್ಸಿಪಲ್ ಮತ್ತು ಕೃಷಿತ್ಯಾಜ್ಯಗಳ
ಸುಡುವಿಕೆ ಮತ್ತು ಶವಸಂಸ್ಕಾರ ಇವುಗಳಲ್ಲಿ ಸೇರಿವೆ ಎಂದು ವರದಿಯು ತಿಳಿಸಿದೆ.
ದ.ಏಶ್ಯಾದ ಸುಮಾರು ಶೇ.60ರಷ್ಟು ಜನಸಂಖ್ಯೆ ವಿಶ್ವ ಆರೋಗ್ಯ ಸಂಸ್ಥೆಯ ಮಧ್ಯಂತರ ಗುರಿ
ಮಟ್ಟಕ್ಕಿಂತ ಅಧಿಕ ವಾಯುಮಾಲಿನ್ಯವಿರುವ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ವಾಯು
ಗುಣಮಟ್ಟದ ಪ್ರಾದೇಶಿಕ ಪರಸ್ಪರ ಅವಲಂಬನೆಯಿಂದಾಗಿ ತಾಂತ್ರಿಕವಾಗಿ ಕಾರ್ಯಸಾಧ್ಯವಿರುವ
ಎಲ್ಲ ಕ್ರಮಗಳನ್ನು ಸಂಪೂರ್ಣವಾಗಿ ಜಾರಿಗೊಳಿಸಿದರೂ ದ.ಏಶ್ಯಾದ ಭಾಗಗಳು 2030ರ ವೇಳೆಗೆ
ಡಬ್ಲುಎಚ್‌ಒ (WHO)ಮಧ್ಯಂತರ ಗುರಿಯನ್ನು ತಾವಾಗಿಯೇ ತಲುಪುವುದು ಸಾಧ್ಯವಿಲ್ಲ ಎಂದು
ವರದಿಯು ತಿಳಿಸಿದೆ.
ದ.ಏಶ್ಯಾದಲ್ಲಿ ವಾಯುಮಾಲಿನ್ಯವು ಬಹು ದೂರದವರೆಗೆ
ಪ್ರಯಾಣಿಸಿದರೂ ಅದು ಪ್ರದೇಶದಲ್ಲಿ ಏಕರೂಪವಾಗಿ ಹರಡುವುದಿಲ್ಲ,ಹವಾಮಾನ ಮತ್ತು
ಭೌಗೋಳಿಕತೆಯ ಪರಿಣಾಮವಾಗಿ ರೂಪುಗೊಂಡ ದೊಡ್ಡ 'ಏರ್ಶೆಡ್ '(Airshed)ಗಳಲ್ಲಿ
ಸಿಕ್ಕಿಹಾಕಿಕೊಳ್ಳುತ್ತದೆ ಎಂದು ಅದು ಹೇಳಿದೆ.
ವರದಿಯು ತಿಳಿಸಿರುವಂತೆ
ಪಶ್ಚಿಮ/ಮಧ್ಯ ಭಾರತ ಗಂಗಾ ಬಯಲು,ಮಧ್ಯ/ಪೂರ್ವ ಭಾರತ ಗಂಗಾ ಬಯಲು,ಒಡಿಶಾ ಮತ್ತು
ಛತ್ತೀಸ್ಗಡ,ಪೂರ್ವ ಗುಜರಾತ ಮತ್ತು ಪಶ್ಚಿಮ ಮಹಾರಾಷ್ಟ್ರ,ಉತ್ತರ/ಮಧ್ಯ ಸಿಂಧು ನದಿ ಬಯಲು
ಮತ್ತು ದಕ್ಷಿಣ ಸಿಂಧು ಬಯಲು,ಹೀಗೆ ದ.ಏಶ್ಯಾ ಪ್ರದೇಶದಲ್ಲಿಯ ಆರು ಕಡೆಗಳಲ್ಲಿ ಇಂತಹ
ದೊಡ್ಡ 'ಏರ್ಶೆಡ್'ಗಳಿವೆ.
ವಿಶ್ವಬ್ಯಾಂಕ್ ವಾಯುಮಾಲಿನ್ಯವನ್ನು ತಗ್ಗಿಸುವ
ಕುರಿತು ನೀತಿ ಅನುಷ್ಠಾನಗಳ ಪ್ರಮಾಣ ಮತ್ತು ದೇಶಗಳ ನಡುವೆ ಸಹಕಾರದ ಆಧಾರದಲ್ಲಿ ನಾಲ್ಕು
ಸಾಧ್ಯತೆಗಳನ್ನು ವಿಶ್ಲೇಷಿಸಿದೆ. ಏರ್ಶೆಡ್ ಗಳ ನಡುವೆ ಸಂಪೂರ್ಣ ಸಮನ್ವಯವು ಅತ್ಯಂತ
ಮಿತವ್ಯಯಕಾರಿ ಸಾಧ್ಯತೆಯಾಗಿದ್ದು,ಇದು ದ.ಏಶ್ಯಾದಲ್ಲಿ ವಾಯುಮಾಲಿನ್ಯವನ್ನು ತಗ್ಗಿಸುವ
ಮೂಲಕ ವಾರ್ಷಿಕ 7.5 ಲ.ಜೀವಗಳನ್ನು ಉಳಿಸಬಲ್ಲದು ಎಂದು ಅದು ತಿಳಿಸಿದೆ.
ಪರಿಸರವ್ಯವಸ್ಥೆ ಸೇವೆಗಳಿಗೆ ಪಾವತಿಯಾಗಿ ನಗದು ವರ್ಗಾವಣೆಯು ಕೃಷಿ ತ್ಯಾಜ್ಯ
ಸುಡುವಿಕೆಯನ್ನು ಶೇ.80ರವರೆಗೆ ತಗ್ಗಿಸುತ್ತದೆ ಎನ್ನುವುದನ್ನು ಭಾರತದ ಇತ್ತೀಚಿನ
ಪುರಾವೆಗಳು ಸೂಚಿಸಿವೆ ಎಂದು ವರದಿಯಲ್ಲಿ ತಿಳಿಸಿರುವ ವಿಶ್ವಬ್ಯಾಂಕ್,ಸ್ವಚ್ಛ ಸ್ಟವ್ಗಳ
ಬಳಕೆ ಮತ್ತು ರಸಗೊಬ್ಬರಗಳಿಗೆ ಸಬ್ಸಿಡಿಯನ್ನು ಮರುಪರಿಶೀಲಿಸುವ ಅಗತ್ಯವನ್ನು ಒತ್ತಿ
ಹೇಳಿದೆ.