ನವದೆಹಲಿ :ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ (FCRA)ಯ ವ್ಯಾಪ್ತಿಯಿಂದ ವಿನಾಯಿತಿ ಪಡೆದಿರುವ ಒಟ್ಟು 117 ವಿಶ್ವಸಂಸ್ಥೆ(WHO) ಅಧೀನದ ಸಂಸ್ಥೆಗಳು ಮತ್ತು ಇತರ ಅಂತರರಾಷ್ಟ್ರೀಯ ಸಂಸ್ಥೆಗಳ ಪಟ್ಟಿಯನ್ನು ಕೇಂದ್ರ ಸರಕಾರವು ಬಿಡುಗಡೆಗೊಳಿಸಿದೆ.
ವಿದೇಶಿ ದೇಣಿಗೆಗಳನ್ನು ಸ್ವೀಕರಿಸುವ ಭಾರತೀಯ ಸಂಸ್ಥೆಗಳು ಎಫ್ಸಿಆರ್‌ಎ ಅಡಿ ನೋಂದಣಿ ಮಾಡಿಸುವುದು ಮತ್ತು ದಿಲ್ಲಿಯಲ್ಲಿನ ಎಸ್ಬಿಐನ ನಿಯೋಜಿತ ಶಾಖೆಯಲ್ಲಿ ವಿಶೇಷ ಖಾತೆಯನ್ನು ಹೊಂದಿರುವುದು ಕಡ್ಡಾಯವಾಗಿದೆ.
ಗೃಹ ಸಚಿವಾಲಯವು ಬಿಡುಗಡೆಗೊಳಿಸಿರುವ ಎಫ್ಸಿಆರ್‌ಎ ಅಡಿ ವಿದೇಶಿ ಮೂಲ'ದ ವ್ಯಾಖ್ಯೆಗೊಳಪಡದ 117 ಸಂಸ್ಥೆಗಳಲ್ಲಿ ವಿಶ್ವಸಂಸ್ಥೆ ವ್ಯವಸ್ಥೆಯ ಸಚಿವಾಲಯ,ಮಾನವ ಹಕ್ಕುಗಳಿಗಾಗಿ ವಿಶ್ವಸಂಸ್ಥೆ ರಾಯಭಾರಿ ಕಚೇರಿ,ನಿರಾಶ್ರಿತರಿಗಾಗಿ ವಿಶ್ವಸಂಸ್ಥೆ ರಾಯಭಾರಿ ಕಚೇರಿ,ವಿಶ್ವಸಂಸ್ಥೆಯ ಬಂಡವಾಳ ಅಭಿವೃದ್ಧಿ ನಿಧಿ,ಯುನಿಸೆಫ್,ಯುನೆಸ್ಕೋ,ವಿಶ್ವ ಆರೋಗ್ಯ ಸಂಸ್ಥೆ, ಮರುನಿರ್ಮಾಣ ಮತ್ತು ಅಭಿವೃದ್ಧಿಗಾಗಿ ಅಂತರಾಷ್ಟ್ರೀಯ ಬ್ಯಾಂಕ್ (ಐಬಿಆರ್ಡಿ),ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್),ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ಎಡಿಬಿ) ಇತ್ಯಾದಿಗಳು ಸೇರಿವೆ.
2014ರಲ್ಲಿ ನರೇಂದ್ರ ಮೋದಿ(Narendra Modi) ಸರಕಾರವು ಅಧಿಕಾರಕ್ಕೆ ಬಂದ ಬಳಿಕ ಎಫ್ಸಿಆರ್‌ಎಗೆ ಸಂಬಂಧಿಸಿದ ನಿಯಮಗಳನ್ನು ಬಿಗುಗೊಳಿಸಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಕಾನೂನಿನ ವಿವಿಧ ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸುಮಾರು 2,000 ಎನ್ಜಿಒಗಳ ಎಫ್ಸಿಆರ್‌ಎ ನೋಂದಣಿಯನ್ನೂ ಸರಕಾರವು ರದ್ದುಗೊಳಿಸಿದೆ.
2021 ಡಿಸೆಂಬರ್ ಅಂತ್ಯದವರೆಗೆ ಎಫ್ಸಿಆರ್‌ಎ ಅಡಿ ನೋಂದಣಿ ಹೊಂದಿದ್ದ 22,762 ಸಂಸ್ಥೆಗಳಿದ್ದವು.