ನವದೆಹಲಿ : ರಾಷ್ಟ್ರ ರಾಜಧಾನಿ ಮತ್ತು ಉತ್ತರ ಭಾರತದಲ್ಲಿ ಈ ಋತುವಿನಲ್ಲಿ ಮೊದಲ ಬಾರಿಗೆ ಸೋಮವಾರ ಮುಂಜಾನೆ ದಟ್ಟ ಮಂಜು ಆವರಿಸಿದ್ದು, ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತು. ಕೇವಲ 150 ಮೀಟರ್‍ಗಿಂತ ದೂರದ ವಸ್ತುಗಳು ಕೂಡಾ ಕಾಣಿಸದಷ್ಟು ದಟ್ಟವಾಗಿ ಮಂಜು ಕವಿದಿತ್ತು.
ಪಾಲಂ ವಿಮಾನ ನಿಲ್ದಾಣದಲ್ಲಿ ಮುಂಜಾನೆ 3.30ರ ಸುಮಾರಿಗೆ ಗೋಚರತೆ (ಬೆಳಕಿನ ಪ್ರಮಾಣ) 150-200 ಮೀಟರ್‍ಗೆ ಕುಸಿದಿತ್ತು. ಆದರೆ 7 ಗಂಟೆಯ ವೇಳೆಗೆ ಇದು 350 ಮೀಟರ್‍ಗೆ ಹೆಚ್ಚಿತು ಎಂದು ಹವಾಮಾನ ಇಲಾಖೆ ಹೇಳಿದೆ. ಹಲವು ರೈಲುಗಳ ಸಂಚಾರ ವ್ಯತ್ಯಯವಾಗಿದ್ದು, ವಿಮಾನ ಸಂಚಾರಕ್ಕೆ ಯಾವುದೇ ಅಡ್ಡಿಯಾಗಿಲ್ಲ ಎಂದು ಅಧಿಕೃತ ಮೂಲಗಳು ಹೇಳಿವೆ. ಮುಂದಿನ 4-5 ದಿನಗಳ ಕಾಲ ಇದೇ ರೀತಿಯ ವಾತಾವರಣ ದೆಹಲಿ ಮತ್ತು ಗಂಗಾನದಿ ಬಯಲಿನುದ್ದಕ್ಕೂ ಮುಂದುವರಿಯಲಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಏತನ್ಮಧ್ಯೆ ನಗರದ ವಾಯು ಗುಣಮಟ್ಟ ಗಂಭೀರ ಸ್ಥಿತಿಗೆ ಕುಸಿದಿದೆ.
ಉತ್ತರ ರಾಜ್ಯಗಳಲ್ಲಿ ದಟ್ಟ ಮಂಜಿನಿಂದಾಗಿ ಸಂಭವಿಸಿದ ಅಪಘಾತಗಳು ಮತ್ತು ವಾಹನಗಳ ದಟ್ಟಣೆಯಿಂದಾಗಿ ಕನಿಷ್ಠ 11 ಮಂದಿ ಮೃತಪಟ್ಟಿದ್ದಾರೆ. ಉತ್ತರ ಪ್ರದೇಶದ ನಾಲ್ಕು ಜಿಲ್ಲೆಗಳಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದರೆ, ಪಂಜಾಬ್‍ನಲ್ಲಿ ಮೂರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಉತ್ತರ ಪ್ರದೇಶದ ಅಲೀಗಢ ಜಿಲ್ಲೆಯಲ್ಲಿ 18 ವಾಹನಗಳು ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದ್ದು, ಮೂರು ಮಂದಿ ಮೃತಪಟ್ಟಿದ್ದಾರೆ. ಹಾಪುರ- ಲಕ್ನೋ ಹೆದ್ದಾರಿಯಲ್ಲಿ ವ್ಯಾನ್, ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಒಬ್ಬ ಮೃತಪಟ್ಟಿದ್ದಾರೆ.
ಮಗುಚಿ ಬಿದ್ದ ವಾಹನಕ್ಕೆ ಹಲವು ವಾಹನಗಳು ಡಿಕ್ಕಿ ಹೊಡೆದಿವೆ. ಸೋಮವಾರ ಮುಂಜಾನೆ ಆರು ವಾಹನಗಳು ಇದೇ ಪ್ರದೇಶದಲ್ಲಿ ಅಪಘಾತಕ್ಕೀಡಾಗಿವೆ. ಆಗ್ರಾ- ಲಕ್ನೋ ಎಕ್ಸ್‍ಪ್ರೆಸ್ ಹೈವೆಯ ಔರಿಯಾ ಎಂಬಲ್ಲಿ ಬಸ್ಸಿಗೆ ಲಾರಿ ಡಿಕ್ಕಿ ಹೊಡೆದು ಸಂಭವಿಸಿದ ದುರಂತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಪಿಕಪ್ ಟ್ರಕ್, ಬೈಕಿಗೆ ಡಿಕ್ಕಿ ಹೊಡೆದ ಘಟನೆಯಲ್ಲಿ ಯುವಕನೊಬ್ಬ ಮೃತಪಟ್ಟಿದ್ದಾನೆ.
ಪಂಜಾಬ್‍ನಲ್ಲಿ ಟ್ರ್ಯಾಕ್ಟರ್ ಟ್ರೇಲರ್‍ಗೆ ಟ್ರಕ್ ಬಡಿದು ಸಂಭವಿಸಿದ ದುರಂತದಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದಾರೆ. ನಭಾ- ಮಲೇರ್‍ಕೋಟ್ಲಾ ರಸ್ತೆಯಲ್ಲಿ ಈ ದುರಂತ ಸಂಭವಿಸಿದ್ದು, ಎಂಟು ವಾಹನಗಳು ಮಲೌಟ್-ಭಟಿಂಡಾ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿವೆ.