ಮೂಲಭೂತ ಸೌಕರ್ಯಗಳಾದ ರಸ್ತೆ, ಕುಡಿಯುವ ನೀರು, ಶಿಕ್ಷಣ ಮತ್ತು ಇತರ ಸೌಲಭ್ಯಗಳ ನೀಡುವಲ್ಲಿ ಮಹಾರಾಷ್ಟ್ರ ಸರ್ಕಾರ ವಿಫಲವಾಗಿದೆ. ನಮ್ಮ ಗ್ರಾಮಗಳು ಯಾವುದೇ ಅಭಿವೃದ್ಧಿ ಕಾಣದೆ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಗಡಿಯಾಚೆಗಿನ ಗ್ರಾಮಗಳನ್ನು ಕರ್ನಾಟಕ ಸರ್ಕಾರ ಅಭಿವೃದ್ಧಿಪಡಿಸಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ, ಆ ಗ್ರಾಮಗಳಲ್ಲಿ ನೆಲೆಸಿರುವ ಕೆಲವು ಕನ್ನಡಿಗರಿಗೆ ಮಹಾರಾಷ್ಟ್ರ ಪೊಲೀಸರು ನೋಟಿಸ್ ಜಾರಿ ಮಾಡಿದ್ದು, ಅವರಿಂದ ಪೂರ್ವಾನುಮತಿ ಪಡೆಯದೆ ಕರ್ನಾಟಕದೊಂದಿಗೆ ವಿಲೀನಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರೆ ಅಥವಾ ಘೋಷಣೆಗಳನ್ನು ಕೂಗಿದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕನ್ನಡದ ಹಿರಿಯ ಮುಖಂಡ ಅಶೋಕ ಚಂದರಗಿ ಮಾತನಾಡಿ, ಗಡಿಭಾಗದಲ್ಲಿ ಮಹಾರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರು ತಮ್ಮ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಲು ಬಯಸಿದ್ದಾರೆ. ಮಹಾರಾಷ್ಟ್ರದ ಗಡಿಯಲ್ಲಿ ಸುಮಾರು 60 ಹಳ್ಳಿಗಳು ಕರ್ನಾಟಕದೊಂದಿಗೆ ವಿಲೀನಗೊಳ್ಳಲು ಬಯಸುತ್ತಿವೆ. ಮುಖ್ಯಮಂತ್ರಿಗಳ ಭೇಟಿಗೆ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿ ಶೀಘ್ರವೇ ಬೆಳಗಾವಿ ಡಿಸಿ, ಎಸ್ಪಿ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಲಾಗುತ್ತದೆ ಎಂದು ಹೇಳಿದ್ದಾರೆ.
ಇತ್ತೀಚೆಗೆ, ಮಹಾರಾಷ್ಟ್ರದ ಜತ್ತ ಪ್ರದೇಶದ 42 ಗ್ರಾಮಗಳು ಕರ್ನಾಟಕದೊಂದಿಗೆ ವಿಲೀನಗೊಳ್ಳಲು ಬಯಸುತ್ತಿವೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದರು.