ಕೀವ್: ಉಕ್ರೇನ್ ಮೇಲೆ ರಷ್ಯಾ ಮತ್ತೆ ಭಾರಿ ದಾಳಿ ನಡೆಸುತ್ತಿದ್ದು, ರಾಜಧಾನಿ ಕೀವ್ ಸೇರಿದಂತೆ ಉಕ್ರೇನ್‌ನ ಹಲವು ಪ್ರದೇಶಗಳ ಮೇಲೆ ಗುರುವಾರ ಪುಟಿನ್ ಪಡೆ 120 ಕ್ಷಿಪಣಿಗಳಿಂದ ಏಕಕಾಲಕ್ಕೆ ದಾಳಿ ನಡೆಸಿದೆ. ಇದು ರಾಷ್ಟ್ರೀಯ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಅತಿದೊಡ್ಡ ದಾಳಿಯಾಗಿದೆ.
ದೇಶದಾದ್ಯಂತ ವಾಯುದಾಳಿಯ ಸೈರನ್ ಮೊಳಗಿತು. ರಷ್ಯಾ 120ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಉಡಾವಣೆ ಮಾಡಿರುವುದಾಗಿ ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್ಸ್ಕಿಯ ಸಲಹೆಗಾರ ಮೈಖೈಲೊ ಪೊಡೊಲ್ಯಾಕ್ ಹೇಳಿದ್ದಾರೆ.
ಕೀವ್ ಮತ್ತು ಖಾರ್ಕಿವ್ ಪಟ್ಟಣಗಳ ಮೇಲೆ ದಾಳಿ ನಡೆಸಿರುವ ಕ್ಷಿಪಣಿಗಳು ಹಲವು ಕಟ್ಟಡಗಳ ಮೇಲೆ ಬಿದ್ದಿದೆ. ಪರಿಣಾಮ ಪಶ್ಚಿಮ ವಲಯದ ನಗರಗಳಲ್ಲಿ ವಿದ್ಯುತ್ ಕಡಿತಗೊಳಿಸಲಾಗಿದೆ.
ರಷ್ಯಾ ವಾಯು ಮತ್ತು ಜಲ ಮಾರ್ಗಗಳ ಮೂಲಕ ಉಕ್ರೇನ್ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದೆ. ಜನ ಎಚ್ಚರಿಕೆಯಿಂದ ಇರಬೇಕೆಂದು ಉಕ್ರೇನ್ ಸೈನ್ಯ ಎಚ್ಚರಿಸಿದೆ. ಈಗಾಗಲೇ ದಾಳಿ ಇನ್ನಷ್ಟು ನಡೆಯುವ ಸಾಧ್ಯತೆ ಇರುವುದರಿಂದಾಗಿ ವಿದ್ಯುತ್ ಕಡಿತಗೊಳಿಸಲಾಗಿದೆ. ಜನ ತಮಗೆ ಬೇಕಾದಷ್ಟು ನೀರನ್ನು ತುಂಬಿಟ್ಟುಕೊಳ್ಳಿ ಎಂದು ಸೂಚಿಸಿದೆ.
"ವಿಮಾನ ಮತ್ತು ಹಡಗುಗಳಿಂದ ವಾಯು ಹಾಗೂ ಸಮುದ್ರ-ಆಧಾರಿತ ಕ್ರೂಸ್ ಕ್ಷಿಪಣಿ ದಾಳಿ" ನಡೆಸುವ ಮುನ್ನ ರಷ್ಯಾ ರಾತ್ರೋರಾತ್ರಿ ಆಯ್ದ ಪ್ರದೇಶಗಳಿಗೆ ಸ್ಫೋಟಕ ಡ್ರೋನ್‌ಗಳನ್ನು ರವಾನಿಸಿದೆ ಎಂದು ಉಕ್ರೇನಿಯನ್ ವಾಯುಪಡೆ ವರದಿ ಮಾಡಿದೆ.