ಬದಿಯಡ್ಕ: ಯುವಕರು ಸಂಘಟನೆಯ ಮೂಲಕ ಊರಿನಲ್ಲಿ ಸದಾ ಚಟುವಟಿಕೆಯಿಂದಿರುವುದು ಶ್ಲಾಘನೀಯ. ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿರುವ ಶಿವಾಜಿ ಫ್ರೆಂಡ್ಸ್ ನಮ್ಮ ಊರಿನ ಹೆಮ್ಮೆಯ ಸಂಘಟನೆ ಎಂದು ಕಾಸರಗೋಡು ಬ್ಲೋಕ್ ಪಂಚಾಯಿತಿ ಸದಸ್ಯೆ ಅಶ್ವಿನಿ ಭಟ್ ನೀರ್ಚಾಲು ಹೇಳಿದರು.
ನೀರ್ಚಾಲು ಶಿವಾಜಿ ಫ್ರೆಂಡ್ಸ್ ಇದರ ಭಾನುವಾರ ನಡೆದ 12ನೇ ವಾರ್ಷಿಕೋತ್ಸವದ ಸಭಾಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಮಾಜಿಕ ಕಾರ್ಯಕರ್ತ ಗಣೇಶ್ ಕೃಷ್ಣ ಅಳಕ್ಕೆ ಅಧ್ಯಕ್ಷತೆ ವಹಿಸಿ ಮಾತನಾಡಿ ಊರಿನ ಬಡಜನರನ್ನು ಗುರುತಿಸಿ ಅವರ ಸಾಧನೆಗಳನ್ನು ಸಮಾಜಕ್ಕೆ ತಲುಪಿಸುವ ಕಾರ್ಯ ಶಿವಾಜಿಯ ಹೆಸರಿನ ಸಂಘಟನೆ ಮಾಡುತ್ತಿದೆ. ಹೆಸರಿಗೆ ತಕ್ಕಂತೆ ಸಂಘಟನೆಯು ಸಮಾಜದ ಕಣ್ಣಾಗಿ ಬೆಳಗಲಿ ಎಂದರು. ಬದಿಯಡ್ಕ ಗ್ರಾಮಪಂಚಾಯಿತಿ ಸದಸ್ಯೆ ಸ್ವಪ್ನ ಶುಭಹಾರೈಸಿದರು.
ಕೃಷಿಕ್ಷೇತ್ರದ ಸಾಧಕ ಹಾಗೂ ತಾಲೀಮು ಗುರುಗಳಾದ ಗೋಪಾಲ ನೀರ್ಚಾಲು, ತಲೆಹೊರೆಕಾರ್ಮಿಕ ರಾಮ ನೀರ್ಚಾಲು, ಇಲೆಕ್ಟ್ರೀಷಿಯನ್ ಕೊಗ್ಗ ರತ್ನಗಿರಿ, ದೈವ ನರ್ತಕ ಆನಂದ ಪೆರಿಯಡ್ಕ ಎಂಬವರನ್ನು ಸನ್ಮಾನಿಸಲಾಯಿತು. ನಂತರ ಸನ್ನಿಧಿ ಕಲಾವಿದರು ಉಡುಪಿ ಅವರಿಂದ `ಅಪ್ಪೆ ಮಂತ್ರದೇವತೆ' ತುಳು ನಾಟಕ ಪ್ರದರ್ಶನಗೊಂಡಿತು. ಪ್ರವೀಣ ಪುದುಕೋಳಿ ಸ್ವಾಗತಿಸಿ, ಗಣೇಶ್ ಪಿ.ಎನ್.ಮುಂಡಾನ್ತಡ್ಕ ನಿರೂಪಿಸಿದರು.