ಬಾಲಾಘಾಟ್: ತನ್ನ ತಲೆಗೆ 12 ಲಕ್ಷ ರೂಪಾಯಿ ಬಹುಮಾನ ಹೊಂದಿದ್ದ ಮತ್ತು ಕನಿಷ್ಠ ಮೂರು ರಾಜ್ಯಗಳಲ್ಲಿ ಬೇಕಾಗಿದ್ದ ಮಾವೋವಾದಿಯನ್ನು ಮಧ್ಯ ಪ್ರದೇಶದ ಬಾಲಾಘಾಟ್ ಜಿಲ್ಲೆಯ ಅರಣ್ಯದಲ್ಲಿ ಪೊಲೀಸರು ಭಾನುವಾರ ಎನ್‌ಕೌಂಟರ್ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಾವೋವಾದಿಗಳು ಮತ್ತು ಹಾಕ್ ಫೋರ್ಸ್ ಸಿಬ್ಬಂದಿಗಳ ನಡುವೆ ಎನ್‌ಕೌಂಟರ್ ನಡೆದಿದ್ದು, ಮಾವೋವಾದಿಗಳ ಸುಳಿವಿನ ಬಗ್ಗೆ ಖಚಿತ ಮಾಹಿತಿ ಪಡೆದ ನಂತರ ರೂಪ್‌ಜರ್ ಪೊಲೀಸ್ ಠಾಣಾ ವ್ಯಾಪ್ತಿಯ ಹರಟೋಲಾ ಅರಣ್ಯದಲ್ಲಿ ಇಂದು ಬೆಳಗ್ಗೆ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು ಎಂದು ಪೊಲೀಸ್ ಮಹಾ ನಿರ್ದೇಶಕ ಸಂಜಯ್ ಸಿಂಗ್ ಹೇಳಿದ್ದಾರೆ.
ಮಾವೋವಾದಿಗೆ ಶರಣಾಗುವಂತೆ ಸೂಚಿಸಲಾಯಿತು. ಆದರೆ ಇದಕ್ಕೆ ಒಪ್ಪದ ಮಾವೋವಾದಿ ಭದ್ರತಾ ಸಿಬ್ಬಂದಿ ಮೇಲೆ ಗುಂಡು ಹಾರಿಸಿದರು. ಹೀಗಾಗಿ ಎನ್ ಕೌಂಟರ್ ಮಾಡಲಾಯಿತು ಎಂದು ಅವರು ತಿಳಿಸಿದ್ದಾರೆ.
ಹತ್ಯೆಯಾದ ಮಾವೋವಾದಿಯನ್ನು ಭೋರಮ್‌ದೇವ್ ದಲಂ ಸದಸ್ಯ ರೂಪೇಶ್ ಅಲಿಯಾಸ್ ಹೂಂಗಾ ಎಂದು ಗುರುತಿಸಲಾಗಿದೆ.
ಹೂಂಗಾ ತಲೆಗೆ 12 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಮಹಾರಾಷ್ಟ್ರ, ಮಧ್ಯ ಪ್ರದೇಶ ಮತ್ತು ಛತ್ತೀಸ್‌ಗಢದ ಪೊಲೀಸರಿಗೆ ಬೇಕಾಗಿದ್ದ ಎಂದು ಸಿಂಗ್ ತಿಳಿಸಿದ್ದಾರೆ.