ಗಾಂಧಿನಗರ: ರಾಷ್ಟ್ರದಾದ್ಯಂತ ತೀವ್ರ ಗಮನ ಸೆಳೆದಿದ್ದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ದಿಗ್ವಿಜಯದತ್ತ ಮುನ್ನಡೆದಿದ್ದು, ಡಿಸೆಂಬರ್ 12 ರಂದು ನೂತನ ಮುಖ್ಯಮಂತ್ರಿಯ ಪದಗ್ರಹಣ ಸಮಾರಂಭ ನಡೆಯುವುದು ಖಚಿತವಾಗಿದೆ.
ಸೋಮವಾರ ಮಧ್ಯಾಹ್ನ 12 ರಿಂದ 2 ಗಂಟೆಯವರೆಗೂ ನಡೆಯಲಿರುವ ಸಮಾರಂಭದಲ್ಲಿ ಭೂಪೇಂದ್ರ ಪಟೇಲ್ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಗುಜರಾತ್ ಬಿಜೆಪಿ ಅಧ್ಯಕ್ಷ ಸಿ.ಆರ್. ಪಾಟೀಲ್ ತಿಳಿಸಿದ್ದಾರೆ.
ಭೂಪೇಂದ್ರ ಪಟೇಲ್ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಅವರು ಕಳೆದ ವರ್ಷ ಸೆಪ್ಟೆಂಬರ್ 12ರಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಮೊದಲ ಬಾರಿಗೆ ಆಯ್ಕೆಯಾಗಿದ್ದರು. ಗುಜರಾತ್ ನಲ್ಲಿ ಏಳನೇ ಬಾರಿಗೆ ಬಿಜೆಪಿ ಅಧಿಕಾರ ಹಿಡಿಯುತ್ತಿದ್ದು, ಭೂಪೇಂದ್ರ ಪಟೇಲ್ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಸಿ.ಆರ್. ಪಾಟೀಲ್ ಸುದ್ದಿಗೋಷ್ಛಿಯಲ್ಲಿ ತಿಳಿಸಿದರು.
ಗುಜರಾತಿನ ಜನಾದೇಶವನ್ನು ಪಕ್ಷ ತುಂಬು ಹೃದಯದಿಂದ ಸ್ವೀಕರಿಸುತ್ತದೆ. ಜನ ಸೇವೆಯತ್ತ ಪಕ್ಷದ ಬದ್ಧತೆಯನ್ನು ಪಕ್ಷ ಹೊಂದಿರುವುದಾಗಿ ಪಟೇಲ್ ಭರವಸೆ ನೀಡಿದರು. ಗುಜರಾತ್ ಚುನಾವಣೆಯ ಫಲಿತಾಂಶ ಸ್ಪಷ್ಟವಾಗಿದೆ. ಗುಜರಾತಿನಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ಮುಂದುವರಿಕೆಗೆ ಜನರು ಆಶೀರ್ವಾದ ಮಾಡಿದ್ದು, ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತರು ಜನರ ಸೇವೆ ಮಾಡಲು ಬದ್ಧರಾಗಿರುವುದಾಗಿ ಮುಖ್ಯಮಂತ್ರಿ ತಿಳಿಸಿದರು.
ಮಧ್ಯಾಹ್ನ 2 ಗಂಟೆವರೆಗಿನ ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಬಿಜೆಪಿ 11 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, 156 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇದೇ ರೀತಿ ಮುಂದುವರೆದರೆ ಪಕ್ಷ ಐತಿಹಾಸಿಕ ಗೆಲುವು ಸಾಧಿಸಲಿದೆ.