ಜಮ್ಮು: ಜಮ್ಮು-ಕಾಶ್ಮೀರದ ಭಯೋತ್ಪಾದನಾ ಚಟುವಟಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಜಿಲ್ಲೆಗಳ 14 ಸ್ಥಳಗಳಲ್ಲಿ ಎನ್‌ಐಎ ಶುಕ್ರವಾರ ಶೋಧ ನಡೆಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಮ್ಮುವಿನ ಎನ್‌ಐಎ ಪೊಲೀಸ್ ಠಾಣೆಯಲ್ಲಿ ಜೂನ್ 21ರಂದು ಸ್ವಯಂಪ್ರೇರಿತವಾಗಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು, ಕುಲ್ಗಾಮ್ (ದಕ್ಷಿಣ ಕಾಶ್ಮೀರ), ಪುಲ್ವಾಮಾ, ಅನಂತನಾಗ್ ಮತ್ತು ಸೋಪೋರ್‌ನಲ್ಲಿ (ಉತ್ತರ ಕಾಶ್ಮೀರದ ಬಾರಾಮುಲ್ಲಾ) ಶೋಧ ನಡೆಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಶೋಧ ಕಾರ್ಯಾಚರಣೆಯಲ್ಲಿ ಡಿಜಿಟಲ್ ಸಾಧನಗಳು, ಸಿಮ್ ಕಾರ್ಡ್ ಮತ್ತು ಡಿಜಿಟಲ್ ಶೇಖರಣಾ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಐಎ ವಕ್ತಾರರು ತಿಳಿಸಿದ್ದಾರೆ.
ವಿವಿಧ ನಿಷೇಧಿತ ಸಂಘಟನೆಗಳ ಕಾರ್ಯಕರ್ತರು ಭಯೋತ್ಪಾದಕ ಮತ್ತು ವಿಧ್ವಂಸಕ ಚಟುವಟಿಕೆ ನಡೆಸಲು ಪಿತೂರಿ ನಡೆಸುತ್ತಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸೈಬರ್-ಸ್ಪೇಸ್ ಬಳಸಿಕೊಂಡು ಭಯೋತ್ಪಾದಕ ದಾಳಿಗಳನ್ನು ನಡೆಸುವಲ್ಲಿ ಅವರು ತೊಡಗಿಸಿಕೊಂಡಿದ್ದು, ಅಲ್ಪಸಂಖ್ಯಾತರು, ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಜಮ್ಮು -ಕಾಶ್ಮೀರದಲ್ಲಿ ಕೋಮು ಸೌಹಾರ್ದತೆಯನ್ನು ಕದಡುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.