ನವದೆಹಲಿ: 'ಸಾಂದರ್ಭಿಕ ಸಾಕ್ಷ್ಯಗಳ ಕೊರತೆ, ಉಲ್ಲೇಖಿತ ಸಂದರ್ಭಗಳಿಗೆ ಸಂಬಂಧವಿಲ್ಲ ಎಂಬ ಆಧಾರದಲ್ಲಿ, 14 ವರ್ಷದ ಬಳಿಕ ಇಬ್ಬರು ಮಹಿಳೆಯರನ್ನು ವೇಶ್ಯಾವಾಟಿಕೆಗೆ ಪ್ರಚೋದನೆ ನೀಡಿದ ಆರೋಪ ಪ್ರಕರಣದಿಂದ ಕೋರ್ಟ್ ಖುಲಾಸೆಗೊಳಿಸಿದೆ.
ಇಲ್ಲಿನ ಜಗಜೀತ್ ನಗರ ಪ್ರದೇಶದಲ್ಲಿ 2008ರ ಅಕ್ಟೋಬರ್ 16ರಂದು ದಾಳಿ ನಡೆಸಿದ್ದ ಪೊಲೀಸರು, ಅನೈತಿಕ ಚಟುವಟಿಕೆ ನಿಯಂತ್ರಣ ಕಾಯ್ದೆ ಸೆಕ್ಷನ್ 8ರಡಿ (ವೇಶ್ಯಾವಾಟಿಕೆಗೆ ಪ್ರಚೋದನೆ) ಇಬ್ಬರು ಮಹಿಳೆಯರ ಮೇಲೆ ಪ್ರಕರಣ ದಾಖಲಿಸಿದ್ದರು.
ಪೊಲೀಸರ ಪರ ವಾದದಲ್ಲಿ ಕೆಲ ಅಂಶಗಳು ಕೈಬಿಡಲಾಗಿದೆ ಎನ್ನಿಸುತ್ತದೆ. ಅಲ್ಲದೆ, ಉಲ್ಲೇಖಿಸಿರುವ ಅಂಶಗಳಿಗೂ ಪರಸ್ಪರ ಸಂಬಂಧ ಇಲ್ಲವಾಗಿದೆ. ಮಹಿಳೆಯರು ವೇಶ್ಯಾವಾಟಿಕೆಗೆ ಪ್ರಚೋದನೆ ನೀಡುತ್ತಿದ್ದರು ಎಂಬುದನ್ನು ನಿರೂಪಿಸಲು ಅಭಿಯೋಜಕರು ವಿಫಲರಾಗಿದ್ದಾರೆ ಎಂದು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರು ಆದೇಶ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.