ನವದೆಹಲಿ: ಸೇನಾ ವಾಹನ ಕಣಿವೆಗೆ ಉರುಳಿದ ಪರಿಣಾಮ 16 ಮಂದಿ ಯೋಧರು ಮೃತಪಟ್ಟಿರುವ ದುರಂತ ಉತ್ತರ ಸಿಕ್ಕಿಂನ ಝೆಮಾದಲ್ಲಿ ಶುಕ್ರವಾರ ಸಂಭವಿಸಿದೆ.
ಚಟ್ಟೆನ್‌ನಿಂದ ಥಂಗು ಪ್ರದೇಶಕ್ಕೆ ತೆರಳುತ್ತಿದ್ದ ಮೂರು ಸೇನಾ ವಾಹನಗಳ ಪೈಕಿ ಒಂದು ವಾಹನ ಅಪಘಾತಕ್ಕೀಡಾಗಿದೆ.
ದಾರಿ ಮಧ್ಯೆ, ಝೆಮಾ ಬಳಿ ಕಡಿದಾದ ಇಳಿಜಾರಿನಲ್ಲಿ ಆಯತಪ್ಪಿದ ಸೇನಾ ವಾಹನ ಕಣಿವೆಗೆ ಉರುಳಿದೆ.
'ಡಿಸೆಂಬರ್ 23ರಂದು ಉತ್ತರ ಸಿಕ್ಕಿಂನ ಝೆಮಾ ಬಳಿ ಸಂಭವಿಸಿದ ಸೇನಾ ಟ್ರಕ್ ಅಪಘಾತದಲ್ಲಿ ಭಾರತೀಯ ಸೇನೆಯ 16 ಮಂದಿ ಯೋಧರು ಜೀವ ಕಳೆದುಕೊಂಡಿದ್ದಾರೆ' ಎಂದು ಸೇನೆ ತಿಳಿಸಿದೆ.
ಸಿಕ್ಕಿಂ ರಾಜಧಾನಿ ಗ್ಯಾಂಗ್‌ಟಕ್‌ನಿಂದ 15 ಕಿ.ಮೀ ದೂರದ ಲಾಚೆನ್‌ನ ಝೆಮಾ ಬಳಿ ಬೆಳಿಗ್ಗೆ 8 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಗಾಯಾಳುಗಳನ್ನು ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
16 ಮೃತದೇಹಗಳನ್ನೂ ಹೊರತೆಗೆಯಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.