ನವದೆಹಲಿ: 2002ರ ಗೋದ್ರಾ ರೈಲು ಬೋಗಿ ಸುಟ್ಟ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಯೊಬ್ಬನಿಗೆ ಸುಪ್ರೀಂ ಕೋರ್ಟ್ ಗುರುವಾರ ಜಾಮೀನು ಮಂಜೂರು ಮಾಡಿದೆ. ಅಪರಾಧಿಯು 17 ವರ್ಷಗಳಿಂದ ಜೈಲಿನಲ್ಲಿರುವುದನ್ನು ಗಮನಿಸಿ ಕೋರ್ಟ್ ಜಾಮೀನು ನೀಡಿದೆ.
ದೀರ್ಘಾವಧಿಯಿಂದ ಜೈಲಿನಲ್ಲಿರುವುದನ್ನು ಗಮನಿಸಿ ಜಾಮೀನು ಮಂಜೂರು ಮಾಡಬೇಕು ಎಂಬ ಅಪರಾಧಿ ಫಾರೂಕ್ ಪರ ವಕೀಲರ ಮನವಿಯನ್ನು ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ. ಎಸ್. ನರಸಿಂಹ ಅವರನ್ನೊಳಗೊಂಡ ಪೀಠವು ಈ ನಿರ್ಧಾರ ಪ್ರಕಟಿಸಿತು.
ಗುಜರಾತ್ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಇದು ಅತ್ಯಂತ ಘೋರ ಅಪರಾಧ. ಇದರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 59 ಜನರನ್ನು ಸಜೀವ ದಹನ ಮಾಡಲಾಗಿತ್ತು' ಎಂದು ತಿಳಿಸಿದರು.
ಸಾಬರಮತಿ ಎಕ್ಸ್‌ಪ್ರೆಸ್‌ನ ಬೋಗಿಗಳಿಗೆ ಕಲ್ಲು ತೂರಾಟ ನಡೆಸಿದ ಆರೋಪದಲ್ಲಿ ಫಾರೂಕ್ ಮತ್ತು ಇತರ ಹಲವರಿಗೆ ಶಿಕ್ಷೆ ವಿಧಿಸಲಾಗಿದೆ.
ಕಲ್ಲು ತೂರಾಟವು ಸಣ್ಣ ಪ್ರಮಾಣದ ಅಪರಾಧ ಎಂದು ಸಾಮಾನ್ಯ ಪರಿಗಣಿಸಲಾಗುತ್ತದೆ. ಆದರೆ, ಈ ಪ್ರಕರಣವೇ ಬೇರೆ. ಪ್ರಯಾಣಿಕರು ಬೋಗಿಯಿಂದ ಹೊರಗೆ ಬರದಂತೆ ಬಾಗಿಲಿನ ಚಿಲಕ ಹಾಕಲಾಗಿತ್ತು. ಕಲ್ಲುಗಳನ್ನೂ ತೂರಲಾಯಿತು. ಅಲ್ಲದೇ, ಅಗ್ನಿಶಾಮಕ ವಾಹನಗಳ ಮೇಲೂ ಕಲ್ಲು ಎಸೆಯಲಾಗಿತ್ತು' ಎಂದು ಹೇಳಿದರು.
2002ರ ಫೆಬ್ರುವರಿ 27ರಂದು, ಗೋದ್ರಾದಲ್ಲಿ ಸಾಬರಮತಿ ಎಕ್ಸ್‌ಪ್ರೆಸ್‌ನ ಎಸ್ -6 ಬೋಗಿಗೆ ಬೆಂಕಿ ಹಚ್ಚಲಾಯಿತು. ಘಟನೆಯಲ್ಲಿ 59 ಜನರು ಮೃತಪಟ್ಟಿದ್ದರು. ಇದು ಗುಜರಾತ್‌ನಲ್ಲಿ ಕೋಮು ಗಲಭೆಗೆ ಕಾರಣವಾಗಿತ್ತು.