ತ್ರಿಶ್ಯೂರ್: ಕೇರಳದ ತಿರುವನಂತಪುರದ ಶ್ರೀ ಪದ್ಮನಾಭಸ್ವಾಮಿ ದೇವಾಲಯವು ಕೆಲ ವರ್ಷಗಳ ಹಿಂದೆ ತನ್ನ ಅಪಾರ ಸಂಪತ್ತಿನಿಂದ ದೇಶದ ಗಮನ ಸೆಳೆದಿದ್ದರೆ, ಇದೀಗ ರಾಜ್ಯದ ಇನ್ನೊಂದು ದೇವಾಲಯ ಕೂಡ ಭಾರಿ ಮೊತ್ತದ ಬ್ಯಾಂಕ್ ಠೇವಣಿ ಹೊಂದಿರುವುದು ಬೆಳಕಿಗೆ ಬಂದಿದೆ.
ಗುರುವಾಯೂರ್ ಶ್ರೀಕೃಷ್ಣ ದೇವಾಲಯವು ₹1,737.04 ಕೋಟಿ ಬ್ಯಾಂಕ್ ಠೇವಣಿಯನ್ನು ಹಾಗೂ 271.05 ಎಕರೆ ಜಮೀನನ್ನು ಹೊಂದಿರುವುದು ಮಾಹಿತಿ ಹಕ್ಕು ಕಾಯಿದೆ (ಆರ್‌ಟಿಐ) ಮೂಲಕ ಪಡೆದ ಮಾಹಿತಿಯಿಂದ ಗೊತ್ತಾಗಿದೆ.
ಭಕ್ತರು ಅರ್ಪಿಸಿರುವ ಚಿನ್ನ, ಬೆಳ್ಳಿ ಹಾಗೂ ಅಮೂಲ್ಯ ರತ್ನಗಳ ಭಂಡಾರವೇ ದೇವಾಲಯದಲ್ಲಿದ್ದು, ಭದ್ರತಾ ಕಾರಣಗಳಿಂದಾಗಿ ಇವುಗಳ ಮಾಹಿತಿಯನ್ನು ಬಹಿರಂಗಪಡಿಸಲು ದೇವಾಲಯದ ಆಡಳಿತ ಮಂಡಳಿ ನಿರಾಕರಿಸಿದೆ.
ಶತಮಾನಗಳಷ್ಟು ಹಳೆಯದಾದ ಈ ದೇಗುಲದಲ್ಲಿ ವಿಷ್ಣು ದೇವರನ್ನು ಕೃಷ್ಣನ ರೂಪದಲ್ಲಿ ಆರಾಧಿಸಲಾಗುತ್ತಿದೆ. ದೇಶದ ವಿವಿಧೆಡೆಗಳಿಂದ ಪ್ರತಿವರ್ಷ ಸಾವಿರಾರು ಭಕ್ತರು ಈ ದೇಗುಲಕ್ಕೆ ಭೇಟಿ ನೀಡುತ್ತಾರೆ.
ಸ್ಥಳೀಯ ನಿವಾಸಿ ಹಾಗೂ 'ಪ್ರಾಪರ್ ಚಾನೆಲ್' ಸಂಘಟನೆಯ ಅಧ್ಯಕ್ಷ ಎಂ.ಕೆ. ಹರಿದಾಸ್ ಎಂಬುವವರು ದೇಗುಲದ ಆಸ್ತಿಯ ಕುರಿತು ಆರ್‌ಟಿಐ ಮೂಲಕ ಮಾಹಿತಿ ಕೋರಿದ್ದರು.
'ದೇವಾಲಯದ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸಲಾಗಿದೆ ಮತ್ತು ಜಮೀನಿನ ಮೌಲ್ಯ ಅಂದಾಜಿಸಿಲ್ಲ' ಎಂದು ಗುರುವಾಯೂರ್ ದೇವಸ್ವಂ (ದೇವಾಲಯದ ಆಡಳಿತ ಮಂಡಳಿ) ಹೇಳಿದೆ.
2016ರಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದ ಬಳಿಕ ಇದುವರೆಗೆ ದೇವಾಲಯಕ್ಕೆ ಸರ್ಕಾರದಿಂದ ಯಾವುದೇ ಹಣಕಾಸಿನ ನೆರವು ಪಡೆದಿಲ್ಲ ಎಂದೂ ವಿವರಿಸಿದೆ.