ಕಣ್ಣೂರು : ಕಳೆದ ರಾತ್ರಿ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಫ್ರಾನ್ಸ್ ತಂಡವನ್ನು ಸೋಲಿಸಿ ಆರ್ಜೆಂಟಿನಾ ಜಯಭೇರಿ ಬಾರಿಸಿದ ನಂತರ ಕೊಲ್ಲಂನಲ್ಲಿ ನಡೆದ ವಿಜಯೋತ್ಸವ ಮೆರವಣಿಗೆ ವೇಳೆ ಅಕ್ಷಯ ಕುಮಾರ್ ಎಂಬ 17 ವರ್ಷದ ಯುವಕ ಕುಸಿದು ಸಾವನ್ನಪ್ಪಿದ್ದಾನೆ.
ಪಂದ್ಯ ಪದರ್ಶನದ ಸ್ಟೇಡಿಯಂನಿಂದ ಮೆರವಣಿಗೆ ಸಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ ಎಂದು ವರದಿಯಾಗಿದೆ.
ಮತ್ತೊಂದು ಪ್ರಕರಣದಲ್ಲಿ ಕೇರಳದ ಕಣ್ಣೂರಿನ ಪಲ್ಲಿಯಮೂಲ ಎಂಬಲ್ಲಿ ಎರಡೂ ತಂಡಗಳ ಅಭಿಮಾನಿಗಳ ನಡುವೆ ಉಂಟಾದ ಘರ್ಷಣೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಅವರಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಫೈನಲ್ ಪಂದ್ಯದಲ್ಲಿ ಆರ್ಜೆಂಟಿನಾ ತಂಡ ಜಯಭೇರಿ ಬಾರಿಸುತ್ತಿದ್ದಂತೆಯೇ ಈ ತಂಡದ ಅಭಿಮಾನಿಗಳ ವ್ಯಂಗ್ಯದ ಮಾತುಗಳು ಇನ್ನೊಂದು ತಂಡದ ಅಭಿಮಾನಿಗಳನ್ನು ಕೆರಳಿಸಿದ್ದೇ ಘರ್ಷಣೆಗೆ ಕಾರಣವಾಗಿದೆ. ಈ ಸಂಬಂಧ ಆರು ಜನರನ್ನು ವಶಕ್ಕೆ ಪಡೆಯಲಾಗಿದೆ.
ಕೊಚ್ಚಿಯಲ್ಲಿ ಆರ್ಜೆಂಟಿನಾ ತಂಡದ ವಿಜಯವನ್ನು ಆಚರಿಸುತ್ತಿದ್ದ ಗುಂಪೊಂದನ್ನು ನಿಯಂತ್ರಿಸುವ ವೇಳೆ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆದಿದೆ. ಈ ಸಂಭ್ರಮಾಚರಣೆಯು ಸಂಚಾರ ಅಸ್ತವ್ಯಸ್ತಗೊಳಿಸಿದ್ದರಿಂದ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಶ್ರಮಿಸುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರನ್ನು ರಸ್ತೆಯಲ್ಲಿಯೇ ಗುಂಪೊಂದು ದರದರನೇ ಎಳೆದುಕೊಂಡು ಹೋಗಿದೆ.
ತಿರುವನಂತಪುರಂನ ಪೊಝಿಯೂರ್‌ನಲ್ಲಿ ಫೈನಲ್ ಪಂದ್ಯ ಪ್ರದರ್ಶನ ನಡೆಯುತ್ತಿದ್ದ ಸ್ಥಳದಲ್ಲಿ ಸಮಸ್ಯೆ ಸೃಷ್ಟಿಸುತ್ತಿದ್ದ ಇಬ್ಬರು ಯುವಕರನ್ನು ಅಲ್ಲಿಂದ ಹೊರಕಳುಹಿಸಲು ಯತ್ನಿಸಿದ ಪೊಲೀಸ್ ಇನ್‌ಸ್ಪೆಕ್ಟರ್ ಒಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ ಎಂದೂ ವರದಿಯಾಗಿದೆ.