ಜೈಪುರ: 17 ವರ್ಷ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪದಡಿ ಸ್ವಾಮೀಜಿ ಸರ್ಜುದಾಸ್ ಮಹಾರಾಜ್ ಅವರನ್ನು ಬುಧವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ (ಪೋಕ್ಸೊ) ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 ಅಡಿ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ.
ಬಂಧನದ ಬಳಿಕ ಅವರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸುವಂತೆ ಮ್ಯಾಜಿಸ್ಟ್ರೇಟ್ ಆದೇಶ ನೀಡಿದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಸಂತ್ರಸ್ತೆಯ ತಾಯಿ ಈ ತಿಂಗಳ ಆರಂಭದಲ್ಲಿ ಆಯಸಿಡ್ ದಾಳಿಗೆ ಒಳಗಾಗಿದ್ದು, ದಾಳಿ ಹಿಂದೆ ಸರ್ಜುದಾಸ್ ಮಹಾರಾಜ್ ಇರುವುದಾಗಿ ಅವರು ದೂರಿದ್ದರು. ಆಕೆಯ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದ ಸಂತ್ರಸ್ತೆ, ಆಶ್ರಮದಲ್ಲಿ ಸ್ವಾಮೀಜಿ ನೀಡಿದ ಕಿರಿಕುಳಗಳ ಕುರಿತು ವಿವರಿಸುವ ವೇಳೆ ತಾನು ಕಳೆದ ಎರಡು ವರ್ಷಗಳಿಂದ ಸರ್ಜುದಾಸ್‌ರಿಂದ ಅತ್ಯಾಚಾರಕ್ಕೆ ಒಳಗಾಗಿದ್ದಾಗಿ ಹೇಳಿದ್ದಳು. ಆರೋಪದ ಕುರಿತು ತನಿಖೆ ನಡೆಸಿದ ಬಳಿಕ ಸ್ವಾಮೀಜಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸರ್ಜುದಾಸ್ ಐದು ಆಶ್ರಮಗಳ ಮುಖ್ಯಸ್ಥರಾಗಿದ್ದು, ಮಹಾರಾಷ್ಟ್ರ, ಅಯೋಧ್ಯ ಮತ್ತು ಬದ್ರಿನಾಥದಲ್ಲಿ ಅವರು ಆಶ್ರಮಗಳನ್ನು ಹೊಂದಿದ್ದಾರೆ.