ತಿರುವನಂತಪುರಂ: ಕೊಝಿಕ್ಕೋಡ್‌ನ ಸರಕಾರಿ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ರಾತ್ರಿ 9.30 ರ ನಂತರ ಹಾಸ್ಟೆಲ್‌ನಿಂದ ಹೊರಹೋಗುವುದಕ್ಕೆ ಹೇರಿರುವ ನಿಷೇಧವನ್ನು ಸಮರ್ಥಿಸಿಕೊಂಡಿರುವ ಕೇರಳ ಆರೋಗ್ಯ ವಿಜ್ಞಾನಗಳ ವಿವಿ, 18 ವರ್ಷ ತುಂಬಿದಾಗ ಸಂಪೂರ್ಣ ಸ್ವಾತಂತ್ರ್ಯ ಕೇಳುವುದು ಸರಿಯಾಗದು ಹಾಗೂ ಸಮಾಜಕ್ಕೂ ಒಳ್ಳೆಯದಲ್ಲ, 25 ವರ್ಷ ತುಂಬಿದಾಗ ಯುವಜನತೆ ಸಂಪೂರ್ಣವಾಗಿ ಪ್ರಬುದ್ಧರು ಎಂದು ಹೇಳಬಹುದಾಗಿದೆ ಎಂದು ಕೇರಳ ಹೈಕೋರ್ಟ್‌ಗೆ ಸಲ್ಲಿಸಿದ ತನ್ನ ಅಫಿಡವಿಟ್‌ನಲ್ಲಿ ಹೇಳಿದೆ.
ಕಾಲೇಜಿನ ಲೇಡೀಸ್ ಹಾಸ್ಟೆಲ್‌ನಲ್ಲಿ ವಾಸವಿರುವವರು ರಾತ್ರಿ 9.30 ರ ನಂತರ ಹೊರ ಹೋಗುವ ಹಾಗಿಲ್ಲ ಎಂದು ರಾಜ್ಯದ ಉನ್ನತ ಶಿಕ್ಷಣ ಇಲಾಖೆ ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸಿ ಕೊಝಿಕ್ಕೋಡ್ ಮೆಡಿಕಲ್ ಕಾಲೇಜಿನ ಕೆಲ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಕೇರಳ ಆರೋಗ್ಯ ವಿಜ್ಞಾನಗಳ ವಿವಿ ಮೇಲಿನಂತೆ ಹೇಳಿದೆ.
ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅವರ ಪೀಠವು ಈ ಹಿಂದೆ ಈ ಸೂಚನೆಯನ್ನು ಟೀಕಿಸಿತ್ತಲ್ಲದೆ ವಿವಿ ಸೇರಿದಂತೆ ಎಲ್ಲಾ ಸಂಬಂಧಿತರಿಂದ ಮಾಹಿತಿ ಕೋರಿತ್ತು.
"ಯಾವುದೇ ನಿಯಂತ್ರಣವಿಲ್ಲದೆ ಹಾಸ್ಟೆಲ್ ಗೇಟುಗಳನ್ನು ತೆರೆದಿಡುವುದು ಸಮಾಜದ ಹಿತಾಸಕ್ತಿಗೆ ವಿರುದ್ಧವಾಗಬಹುದು," ಎಂದೂ ಕೇರಳ ಆರೋಗ್ಯ ವಿಜ್ಞಾನಗಳ ವಿವಿ ತನ್ನ ಅಫಿಡವಿಟ್‌ನಲ್ಲಿ ಹೇಳಿದೆ.