ಕೊಚ್ಚಿ: 19 ವರ್ಷದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆಯ 62 ವರ್ಷದ ಅಜ್ಜನನ್ನು ಪೊಲೀಸರು ಬಂಧಿಸಿದ್ದಾರೆ. ಆಕೆಯ ಡೆತ್ನೋಟ್ನಲ್ಲಿದ್ದ ವಿಷಯದ ಆಧಾರದ ಮೇಲೆ ಪೊಲೀಸರು ಈ ಕ್ರಮಕೈಗೊಂಡಿದ್ದಾರೆ. ಇಂಥ ಒಂದು ವಿಚಿತ್ರ ಪ್ರಕರಣ ಕೇರಳದಲ್ಲಿ ನಡೆದಿದೆ.
ಕೇರಳದ ಕೊಚಿಕೋಡ್ನಲ್ಲಿ ಈ ಪ್ರಕರಣ ನಡೆದಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಯುವತಿಯ ಡೆತ್ನೋಟ್ ಸೋಮವಾರ ಪತ್ತೆಯಾಗಿದ್ದು, ಅದರಲ್ಲಿನ ಅಂಶದ ಮೇರೆಗೆ ಪೊಲೀಸರು ಈ ಕಾನೂನು ಕ್ರಮ ಜರುಗಿಸಿದ್ದಾರೆ. ಅಜ್ಜನೇ ಲೈಂಗಿಕ ಶೋಷಣೆ ನಡೆಸುತ್ತಿದ್ದ ಎಂಬುದನ್ನು ಮೊಮ್ಮಗಳು ಡೆತ್ನೋಟ್ನಲ್ಲಿ ಬರೆದಿದ್ದಳು.
ಕಾಲೇಜು ವ್ಯಾಸಂಗ ಮಾಡುತ್ತಿದ್ದ ಮೊಮ್ಮಗಳು ಡಿ. 17ರಂದು ಮನೆಯಲ್ಲಿ ನೇಣು ಹಾಕಿಕೊಂಡಿದ್ದಳು. ಅವಳು ಏಳನೇ ಕ್ಲಾಸ್ನಲ್ಲಿ ಇದ್ದಾಗಿನಿಂದಲೇ ಅವಳ ಮೇಲೆ ಲೈಂಗಿಕ ಕಿರುಕುಳ ನಡೆಯುತ್ತಿತ್ತು ಎಂಬುದು ಆರಂಭಿಕ ವಿಚಾರಣೆಯಲ್ಲಿ ತಿಳಿದುಬಂದಿದೆ. ಆಕೆ ಡೆತ್ನೋಟ್ನಲ್ಲಿ ಈ ಬಗ್ಗೆ ಬರೆದಿದ್ದರಿಂದ ಆರೋಪಿಯು ಅದನ್ನು ಮುಚ್ಚಿಟ್ಟಿದ್ದು, ಇದೀಗ ಪೊಲೀಸರು ಅದನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.
'ಅಮ್ಮಾ.. ನಿನ್ನ ಫೇವರಿಟ್ ವ್ಯಕ್ತಿ ನನಗೆ ಏನು ಮಾಡಿದ್ದಾನೆ ಅಂತ ನಿನ್ನ ತಂದೆಯನ್ನು ಕೇಳು. ನಾನು ಎಲ್ಲವನ್ನೂ ಸಹಿಸಿಕೊಂಡೆ, ಇನ್ನು ಆಗಲ್ಲ..' ಎಂಬ ಸಾಲು ಕೂಡ ಡೆತ್ನೋಟ್ನಲ್ಲಿದೆ. ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದು, ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಪೊಲೀಸ್ ಕಸ್ಟಡಿಗೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.