ತಿರುವನಂತಪುರಂ: ಪಂಚತಾರಾ ಹೋಟೆಲ್‌ಗಳಲ್ಲಿ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳನನ್ನು ತಿರುವನಂತಪುರಂ ಕಂಟೋನ್ಮೆಂಟ್ ಪೊಲೀಸರು ಕೊಲ್ಲಂನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ ವಿನ್ಸೆಂಟ್ ಜಾನಿ (63) ತಮಿಳುನಾಡಿನವನಾಗಿದ್ದು, ಉದ್ಯಮಿಯ ಸೋಗಿನಲ್ಲಿ ವಿವಿಧೆಡೆ ಪಂಚತಾರಾ ಹೊಟೇಲ್ಗಳಲ್ಲಿ ರೂಂ ಪಡೆಯುತ್ತಿದ್ದ. ನಂತರ ಅಲ್ಲಿದ್ದುಕೊಂಡೇ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ನಡೆಸುತ್ತಿದ್ದ.
ಬಂಧಿತ ಆರೋಪಿ ವಿನ್ಸೆಂಟ್ ಜಾನಿ ವಿರುದ್ಧ ದೇಶದ ವಿವಿಧೆಡೆ ಈಗಾಗಲೇ 200ಕ್ಕೂ ಅಧಿಕ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಈತನಿಗಾಗಿ ಅನೇಕ ಸಮಯದಿಂದ ಪೊಲೀಸರು ಹುಡುಕಾಡುತ್ತಿದ್ದರು. ಇದೀಗ ಕೊನೆಗೂ ತಿರುವನಂತಪುರಂ ಕಂಟೋನ್ಮೆಂಟ್ ಪೊಲೀಸರು ಕುಖ್ಯಾತ ಖದೀಮವನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ವಿನ್ಸೆಂಟ್ ಜಾನಿ ತಿರುವನಂತಪುರಂನ ಪಂಚತಾರಾ ಹೊಟೇಲ್ ಒಂದರಲ್ಲಿ ರೂಂ ಮಾಡಿಕೊಂಡಿದ್ದ. ನಂತರ ಅಲ್ಲಿನ ಬೆಲೆಬಾಳುವ ಲ್ಯಾಪ್ಟಾಪ್ ಒಂದನ್ನು ಕಳ್ಳತನ ಮಾಡಿದ್ದಾನೆ. ಲ್ಯಾಪ್ಟಾಪ್ ಕಳುವಾಗಿರುವುದು ಗೊತ್ತಾಗುತ್ತಿದ್ದಂತೆ ಹೊಟೇಲ್ ಸಿಬ್ಬಂದಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ವಿನ್ಸೆಂಟ್ ಜಾನಿಯ ಕೈವಾಡ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ನಂತರ ಪೊಲೀಸರು ಜಾನಿಯ ಮೊಬೈಲ್ ನಂಬರ್ ಟ್ರ್ಯಾಕ್ ಮಾಡಿ, ಕೊಲ್ಲಂ ರೈಲ್ವೇ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಇಂಗ್ಲಿಷ್ ಚೆನ್ನಾಗಿ ಮಾತನಾಡುತ್ತಿದ್ದ ವಿನ್ಸೆಂಟ್ ಜಾನಿ, ಪಂಚತಾರಾ ಹೋಟೆಲ್ ಐಷಾರಾಮಿ ಕೊಠಡಿಗಳನ್ನೇ ಬಾಡಿಗೆಗೆ ಪಡೆಯುತ್ತಿದ್ದ. ಅಲ್ಲಿನ ಸಿಬ್ಬಂದಿಗಳನ್ನು ತನ್ನ ಮಾತಿನ ಮೂಲಕ ಬುಟ್ಟಿಗೆ ಹಾಕಿಕೊಂಡು, ರೂಂ ಬಾಡಿಗೆ ಮತ್ತು ಊಟದ ಬಿಲ್ನ್ನು ಕೊಠಡಿ ಕಾಲಿ ಮಾಡಿದ ದಿನದಂದು ಪಾವತಿಸುತ್ತೇನೆ ಎಂದು ನಂಬಿಸುತ್ತಿದ್ದ. ಬಹುತೇಕ ಹೊಟೇಲ್ಗಳಲ್ಲಿ ಒಂದೆರಡು ದಿನ ಉಳಿದು ದುಬಾರಿ ಬೆಲೆಯ ಮದ್ಯಪಾನ ಮತ್ತು ಆಹಾರವನ್ನು ಆರ್ಡರ್ ಮಾಡಿ ತರಿಸಿಕೊಳ್ಳುತ್ತಿದ್ದ. ತಾನೊಬ್ಬ ಉದ್ಯಮಿ ಎಂಬುದನ್ನು ಹೊಟೇಲ್ ಸಿಬ್ಬಂದಿಗಳಿಗೆ ಬಿಂಬಿಸುವ ಸಲುವಾಗಿ ಅಲ್ಲಿನ ಕಾನ್ಫರೆನ್ಸ್ ಹಾಲ್ ಬುಕ್ ಮಾಡುತ್ತಿದ್ದ. ಈ ವೇಳೆ ಮೀಟಿಂಗ್ ನಡೆಸಬೇಕು, ನನ್ನ ಲ್ಯಾಪ್ಟಾಪ್ ಕೆಟ್ಟು ಹೋಗಿದೆ. ನಿಮ್ಮ ಲ್ಯಾಪ್ಟಾಪ್ ಕೊಡಿ ಎಂದು ಹೊಟೇಲ್ ಸಿಬ್ಬಂದಿಯನ್ನು ಕೇಳಿ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದ. ಲ್ಯಾಪ್ಟಾಪ್ ಕೈಗೆ ಸಿಗುತ್ತಿದ್ದಂತೆ ಅಲ್ಲಿಂದ ಯಾವ ಸುಳಿವನ್ನೂ ನೀಡದೆ ವಿನ್ಸೆಂಟ್ ಜಾನಿ ಪರಾರಿಯಾಗುತ್ತಿದ್ದ.
ವಿನ್ಸೆಂಟ್ ಜಾನಿ ಪ್ರತಿ ಬಾರಿಯೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹೊಟೇಲ್ ಬುಕ್ ಮಾಡುತ್ತಿದ್ದ. ತೇರಿನಾಥನ್, ವಿಜಯಕರನ್, ಮೈಕೆಲ್ ಜೋಸೆಫ್, ದಿಲೀಪ್ ಸ್ಟೀಫನ್, ಮೈಕೆಲ್ ಫೆರ್ನಾಂಡೋ, ರಾಜೀವ್ ದೇಸಾಯಿ, ಸಂಜಯ್ ರಾಣೆ ಮುಂತಾದ ಹೆಸರಿನಲ್ಲಿ ಹೊಟೇಲ್ ಬುಕ್ ಮಾಡಿಕೊಳ್ಳುತ್ತಿದ್ದ. 2018ರಲ್ಲಿ ಕೊಲ್ಲಂನಲ್ಲಿ ಪಂಚತಾರಾ ಹೊಟೇಲ್ ಒಂದರಲ್ಲಿ ಕಳ್ಳತನ ಮಾಡಿ ಪೊಲೀಸರಿಂದ ಬಂಧಿತನಾಗಿದ್ದ.