ಲಕ್ನೊ: 2015ರಲ್ಲೇ ಅಪಹರಣಗೊಂಡು ಕೊಲೆಗೀಡಾಗಿದ್ದಳೆಂದು ಹೇಳಲಾಗಿದ್ದ ಯುವತಿಯೊಬ್ಬಳು ಇನ್ನೂ ಜೀವಂತವಿದ್ದು, ಹತ್ರಾಸ್ ನಲ್ಲಿ (Hathras) ತನ್ನ ಕುಟುಂಬದ ಸದಸ್ಯರೊಂದಿಗೆ ವಾಸಿಸುತ್ತಿರುವ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಪೊಲೀಸರು ಆ ಪ್ರಕರಣದ ಮರು ತನಿಖೆ ಕೈಗೊಂಡಿದ್ದಾರೆ.
ಈ ನಡುವೆ ಅತ್ಯಾಚಾರ ಮತ್ತು ಕೊಲೆ ಆರೋಪಿ ಜೈಲಿನಲ್ಲಿದ್ದಾನೆ ಎಂದು indianexpress.com ವರದಿ ಮಾಡಿದೆ.
ಶನಿವಾರ ಆಲಿಗಢ್ ನ (Aligarh) ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿರುವ ಆರೋಪಿಯ ಕುಟುಂಬದ ಸದಸ್ಯರು, ಕೊಲೆಗೀಡಾಗಿದ್ದಾಳೆಂದು ಹೇಳಲಾಗಿರುವ ಯುವತಿ ಇನ್ನೂ ಜೀವಂತವಿದ್ದು, ತನ್ನ ಕುಟುಂಬದ ಸದಸ್ಯರೊಂದಿಗೆ ಹತ್ರಾಸ್ ನಲ್ಲಿ ವಾಸಿಸುತ್ತಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ. ಯುವತಿಯು ಕಾಣೆಯಾದಾಗ 14 ವರ್ಷ ವಯಸ್ಸಿನ ಬಾಲಕಿಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿ ಆಧರಿಸಿ ಹತ್ರಾಸ್ ಗೆ ಧಾವಿಸಿದ ಪೊಲೀಸರು, ಆಕೆಯಿಂದ ಹೇಳಿಕೆ ಪಡೆಯಲು ಆಲಿಗಢ್ ಗೆ ಕರೆ ತಂದಿದ್ದಾರೆ. ಆಕೆಗೀಗ 21 ವರ್ಷ ವಯಸ್ಸಾಗಿದೆ.
'ಯುವತಿಯನ್ನು ಸೋಮವಾರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅಲ್ಲಿ ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಇದರ ಬೆನ್ನಿಗೆ ಪ್ರಕರಣದ ಕುರಿತು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ. ಆಕೆಯ ಗುರುತನ್ನು ಖಚಿತಪಡಿಸಿಕೊಳ್ಳಲು ಡಿಎನ್‌ಎ ಪರೀಕ್ಷೆ ನಡೆಸುವ ಕುರಿತು ಯೋಚಿಸಲಾಗುತ್ತಿದೆ' ಎಂದು ಆಲಿಗಢ್ ನ ಇನ್ಸ್ ಪೆಕ್ಟರ್ ರಾಘವೇಂದ್ರ ಸಿಂಗ್ ತಿಳಿಸಿದ್ದಾರೆ. 'ಒಂದು ವೇಳೆ ಡಿಎನ್‌ಎ ಪರೀಕ್ಷೆ ವರದಿಯಲ್ಲಿ ಆಕೆಯ ಗುರುತು ಖಾತರಿಗೊಂಡರೆ, ಆರೋಪಿಯ ವಿರುದ್ಧದ ಆರೋಪವನ್ನು ಕೈಬಿಡುವಂತೆ ನ್ಯಾಯಾಲಯಕ್ಕೆ ಪೊಲೀಸರು ಅರ್ಜಿ ಸಲ್ಲಿಸಲಿದ್ದಾರೆ' ಎಂದೂ ಹೇಳಿದ್ದಾರೆ.
ಯುವತಿಯ ಹೇಳಿಕೆ ದಾಖಲಿಸಿಕೊಂಡ ನಂತರ ಆಕೆಯನ್ನು ಆಲಿಗಢ್ ನ ರಕ್ಷಣಾ ನಿವಾಸವೊಂದಕ್ಕೆ ಕಳಿಸಿಕೊಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ
'ಫೆಬ್ರವರಿ 2015ರಲ್ಲಿ 14 ವರ್ಷದ ಬಾಲಕಿಯಾಗಿದ್ದ ಯುವತಿಯು ಕಾಣೆಯಾಗಿದ್ದಳು. ಈ ಸಂಬಂಧ ಆಕೆಯ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕೆಲ ದಿನಗಳ ನಂತರ ಆಗ್ರಾದಲ್ಲಿ ಪತ್ತೆಯಾಗಿದ್ದ ಬಾಲಕಿಯೋರ್ವಳ ಮೃತದೇಹವನ್ನು ಗುರುತು ಹಚ್ಚಿದ್ದ ಆಕೆಯ ತಂದೆ, ಮೃತದೇಹ ತನ್ನ ಪುತ್ರಿಯದ್ದೇ ಎಂದು ಪೊಲೀಸರಿಗೆ ತಿಳಿಸಿದ್ದರು. ಇದಾದ ನಂತರ ಬಾಲಕಿಯ ನೆರಮನೆಯಲ್ಲಿದ್ದ ಯುವಕನ ವಿರುದ್ಧ ಅಪಹರಣ ಮತ್ತು ಕೊಲೆ ಆರೋಪದಡಿ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿತ್ತು. ಆತನ ವಿರುದ್ಧ ಪೊಲೀಸರು ಪೋಕ್ಸೊ ಪ್ರಕರಣವನ್ನೂ ದಾಖಲಿಸಿಕೊಂಡು, ಆತನನ್ನು ಬಂಧಿಸಿ ಜೈಲಿಗೆ ಕಳಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.