ನವದೆಹಲಿ : 2020 ಮತ್ತು 2022ನೇ ಸಾಲಿನಲ್ಲಿ ಕ್ಯಾನ್ಸರ್ ಪ್ರಕರಣ ಹಾಗೂ ಅದರಿಂದ ಮೃತರಾದವರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಮಂಗಳವಾರ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‌ನ (ಐಸಿಎಂಆರ್) ನ್ಯಾಷನಲ್ ಕ್ಯಾನ್ಸರ್ ರಿಜಿಸ್ಟ್ರೀ ಪ್ರೋಗ್ರಾಮ್ ಪ್ರಕಾರ 2020ರಲ್ಲಿ 13,92,179 ಕ್ಯಾನ್ಸರ್ ಪ್ರಕರಣಗಳು ದಾಖಲಾಗಿದ್ದು, 2021ರಲ್ಲಿ 14,26,447 ಹಾಗೂ 2022ರಲ್ಲಿ 14,61,427 ಪ್ರಕರಣಗಳು ದಾಖಲಾಗಿವೆ.
2020ರಲ್ಲಿ 7,70,230 ಮಂದಿ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದರೆ, 2021ರಲ್ಲಿ 7,89,202 ಜನ ಹಾಗೂ 2022ರಲ್ಲಿ 8,08,558 ಮಂದಿ ಮೃತಪಟ್ಟಿದ್ದಾರೆ ಎಂದು ಮಾಂಡವೀಯ ತಿಳಿಸಿದ್ದಾರೆ.
ಕ್ಯಾನ್ಸರ್, ಮಧುಮೇಹ, ಹೃದಯ ಸಂಬಂಧಿ ಕಾಯಿಲೆ ಹಾಗೂ ಪಾರ್ಶ್ವವಾಯು ಕಾಯಿಲೆಗಳನ್ನು ನಿಯಂತ್ರಿಸಲು ಹಾಗೂ ಮುನ್ನೆಚ್ಚರಿಕೆ ಕೈಗೊಳ್ಳಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪ್ರತಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಧನ ಸಹಾಯ ಹಾಗೂ ತಾಂತ್ರಿಕ ಸಹಾಯವನ್ನು ಬೇಡಿಕೆಗೆ ಅನುಗುಣವಾಗಿ ಒದಗಿಸುತ್ತದೆ ಎಂದು ಹೇಳಿದರು.
ಎನ್‌ಪಿಸಿಡಿಸಿಎಸ್ ಅಡಿಯಲ್ಲಿ, 707 ಜಿಲ್ಲಾ ಎನ್‌ಸಿಡಿ ಕ್ಲಿನಿಕ್‌ಗಳು, 268 ಜಿಲ್ಲಾ ಡೇಕೇರ್ ಕೇಂದ್ರಗಳು ಮತ್ತು 5,541 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಎನ್‌ಸಿಡಿ ಕ್ಲಿನಿಕ್‌ಗಳನ್ನು ಸ್ಥಾಪಿಸಲಾಗಿದೆ. ಪ್ರಾದೇಶಿಕ ಜನ ಸಂಖ್ಯೆಯ ಆಧಾರದ ಮೇಲೆ ನಿಯಂತ್ರಣ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದರು.