HEALTH TIPS

2021-22ರಲ್ಲಿ ಕಸ್ಟಮ್ಸ್ ನಿಂದ 833 ಕೆ.ಜಿ.ಚಿನ್ನ ವಶ: ಇದು ದೇಶಕ್ಕೆ ಕಳ್ಳಸಾಗಣೆಯಾದ ಒಟ್ಟು ಚಿನ್ನದ ಶೇ.1ಕ್ಕೂ ಕಡಿಮೆ

               ಸರಕಾರವು 2021-22ನೇ ಸಾಲಿನಲ್ಲಿ ದೇಶದಲ್ಲಿ ಕಳ್ಳಸಾಗಣೆಯಾಗಿದ್ದ 405 ಕೋ.ರೂ. ಮೌಲ್ಯದ 833 ಕೆ.ಜಿ.ಚಿನ್ನವನ್ನು ವಶಪಡಿಸಿಕೊಂಡಿದೆ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯ (DRI)ವು ಇತ್ತೀಚಿಗೆ ಬಿಡುಗಡೆಗೊಳಿಸಿರುವ 'ಭಾರತದಲ್ಲಿ ಕಳ್ಳಸಾಗಾಣಿಕೆ '(Trafficking in India)ವರದಿಯು ತಿಳಿಸಿದೆ.

                 ವಿಗ್ ಗಳಲ್ಲಿ, ಸೂಟ್ಕೇಸ್ ಗಳ ಲೈನಿಂಗ್ ಗಳಲ್ಲಿ ಬಚ್ಚಿಡುವುದು, ನುಂಗುವುದು,ಶರೀರದ ಭಾಗಗಳಲ್ಲಿ ಅಡಗಿಸುವುದು...ಹೀಗೆ ನಾನಾ ರೀತಿಗಳಲ್ಲಿ ಕಳ್ಳಸಾಗಣೆದಾರರು ಚಿನ್ನವನ್ನು ಅಕ್ರಮವಾಗಿ ಭಾರತಕ್ಕೆ ತರುತ್ತಾರೆ. ಆದರೆ ಪತ್ತೆಯಾಗುವ ಚಿನ್ನಕ್ಕಿಂತ ಎಷ್ಟೋ ಪಾಲು ಕಸ್ಟಮ್ಸ್ ಅಧಿಕಾರಿಗಳ ಹದ್ದುಗಣ್ಣಿನಿಂದ ನುಣುಚಿಕೊಳ್ಳುತ್ತದೆ.

                    ಕಸ್ಟಮ್ಸ್ ವಶಪಡಿಸಿಕೊಂಡಿರುವ 833 ಕೆ.ಜಿ.ಚಿನ್ನ ಭಾರೀ ಎಂದು ಕಂಡುಬಂದರೂ ಪತ್ತೆಯಾಗುವ ಚಿನ್ನ ಭಾರತದಲ್ಲಿ ಕಳ್ಳಸಾಗಣೆಯಾಗುವ ಒಟ್ಟು ಚಿನ್ನದ ಶೇ.1ಕ್ಕೂ ಕಡಿಮೆ ಎನ್ನುವುದನ್ನು ಡಿಆರ್‌ಐನ ಹಿಂದಿನ ಅಂಕಿಅಂಶಗಳು ತೋರಿಸಿವೆ.

                    ಸುಮಾರು 150ರಿಂದ 200 ಟನ್ ಚಿನ್ನ ಪ್ರತಿ ವರ್ಷ ಕಳ್ಳಸಾಗಣೆ ಮೂಲಕ ಭಾರತವನ್ನು ತಲುಪುತ್ತದೆ ಎಂದು ಡಿಆರ್‌ಐ ತನ್ನ 2019-20ನೇ ಸಾಲಿನ ವರದಿಯಲ್ಲಿ ತಿಳಿಸಿತ್ತು. ಒಂದು ಟನ್ ಎಂದರೆ ಒಂದು ಸಾವಿರ ಕೆ.ಜಿ.,ಹೀಗಾಗಿ ಪ್ರತಿವರ್ಷ ಭಾರತದೊಳಗೆ ನುಸುಳುವ ಅಕ್ರಮ ಚಿನ್ನದ ಪ್ರಮಾಣಕ್ಕೆ ಹೋಲಿಸಿದರೆ ಪತ್ತೆಯಾಗಿರುವ 833 ಕೆ.ಜಿ.ಏನೂ ಅಲ್ಲ.

                     ಭಾರತವು ವಿಶ್ವದಲ್ಲಿ ಚೀನಾದ ನಂತರ ಎರಡನೇ ಅತ್ಯಂತ ದೊಡ್ಡ ಚಿನ್ನ ಬಳಕೆದಾರ ದೇಶವಾಗಿದೆ. ಆಭರಣಗಳಿಗಾಗಿ ಮಾತ್ರವಲ್ಲ, ಹೂಡಿಕೆಗಾಗಿಯೂ ಚಿನ್ನ ಬಳಕೆಯಾಗುತ್ತದೆ. ಆದರೆ ಭಾರತದಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಚಿನ್ನದ ಉತ್ಪಾದನೆಯಾಗುವುದರಿಂದ ಅದು ತನ್ನ ಅಗತ್ಯಗಳಿಗೆ ಹೆಚ್ಚಾಗಿ ಆಮದುಗಳನ್ನೇ ಅವಲಂಬಿಸಿದೆ.

                    ಭಾರತವು 2020-21ರಲ್ಲಿ 391.3 ಟನ್ ಚಿನ್ನವನ್ನು ಆಮದು ಮಾಡಿಕೊಂಡಿದ್ದರೆ 2021-22ರಲ್ಲಿ ಅದು 525.8 ಟನ್ಗಳಷ್ಟಾಗಿದೆ. ಅದಕ್ಕೂ ಹಿಂದೆ,2016-17ರಿಂದ 2018-19ರವರೆಗೆ ಭಾರತವು ಪ್ರತಿ ವರ್ಷ ಸರಾಸರಿ ಸುಮಾರು 800 ಟನ್ ಚಿನ್ನವನ್ನು ಆಮದು ಮಾಡಿಕೊಂಡಿತ್ತು. ಆದರೆ ಈ ಆಮದು ದೇಶದಲ್ಲಿಯ ಬೇಡಿಕೆಯನ್ನು ಪೂರೈಸಲು ಸಾಲದು,ಇದು ಕಳ್ಳಸಾಗಣೆಗೆ ಕಾರಣವಾಗಿದೆ.

              ವರ್ಲ್ಡ್ ಗೋಲ್ಡ್ ಕೌನ್ಸಿಲ್ ನ ಅಂದಾಜುಗಳಂತೆ 2019ರಲ್ಲಿ ಸಾಂಕ್ರಾಮಿಕಕ್ಕೆ ಮುನ್ನ 120 ಟನ್ ಚಿನ್ನ ಕಳ್ಳಸಾಗಣೆದಾರರ ಮೂಲಕ ಭಾರತವನ್ನು ಪ್ರವೇಶಿಸಿತ್ತು. ಸಾಂಕ್ರಾಮಿಕದ ಸಂದರ್ಭದಲ್ಲಿ ವಿಮಾನ ಯಾನಗಳು ಸ್ಥಗಿತಗೊಂಡಿದ್ದು ಚಿನ್ನದ ಕಳ್ಳಸಾಗಾಣಿಕೆ ಕಡಿಮೆಯಾಗಲು ಕಾರಣವಾಗಿತ್ತು. 2011ರಿಂದ ಚಿನ್ನದ ಕಳ್ಳಸಾಗಣೆ ಹೆಚ್ಚುತ್ತಿದ್ದು,ಇದು ತೆರಿಗೆ ಪ್ರಮಾಣದೊಂದಿಗೆ ತಳುಕು ಹಾಕಿಕೊಂಡಿದೆ ಎನ್ನುತ್ತಾರೆ ತಜ್ಞರು.

                 2011ಕ್ಕೆ ಮೊದಲು, ಚಿನ್ನದ ಆಮದುಗಳ ಮೇಲೆ ತೆರಿಗೆ ಅತ್ಯಲ್ಪವಾಗಿದ್ದಾಗ ಚಿನ್ನದ ಕಳ್ಳಸಾಗಣೆ ಸಮಸ್ಯೆಯಾಗಿರಲಿಲ್ಲ. ಕಳ್ಳ ಸಾಗಣೆ ಮತ್ತು ಅಧಿಕ ತೆರಿಗೆ ಮತ್ತು ವಿಶ್ವಾದ್ಯಂತ ಚಿನ್ನದ ಮೇಲೆ ನಿರ್ಬಂಧಗಳ ನಡುವೆ ಸ್ಪಷ್ಟ ಸಂಬಂಧವಿದೆ ಎಂದು ಇಂಗ್ಲಂಡ್ ನ ಮೆಟಲ್ ಫೋಕಸ್ ನ ಪ್ರಧಾನ ಸಲಹೆಗಾರ (ದ.ಏಶ್ಯಾ) ಚಿರಾಗ್ ಸೇಠ್ ಅಭಿಪ್ರಾಯಿಸಿದ್ದಾರೆ.

                  2012,ಜನವರಿಗೆ ಮೊದಲು ಚಿನ್ನದ ಆಮದುಗಳ ಮೇಲೆ ಪ್ರತಿ 10 ಗ್ರಾಮ್ಗಳಿಗೆ 300 ರೂ.ಸುಂಕವನ್ನು ವಿಧಿಸಲಾಗುತ್ತಿತ್ತು. 2011-12ನೇ ಸಾಲಿನ ಬಜೆಟ್ ನಲ್ಲಿ ಇದನ್ನು ಶೇ.2ಕ್ಕೆ ಏರಿಸಲಾಗಿದ್ದರೆ,2012-13ನೇ ಸಾಲಿನ ಬಜೆಟ್ ನಲ್ಲಿ ಶೇ.4ಕ್ಕೆ ದ್ವಿಗುಣಗೊಳಿಸಲಾಗಿತ್ತು. ಭಾರತದ ಚಾಲ್ತಿ ಖಾತೆ ಕೊರತೆ ತೀವ್ರಗೊಂಡಾಗ 2013ರಲ್ಲಿ ಚಿನ್ನದ ಮೇಲಿನ ಆಮದು ಸುಂಕವನ್ನು ಮೂರು ಸಲ ಪರಿಷ್ಕರಿಸಲಾಗಿತ್ತು ಮತ್ತು ಆ ವರ್ಷದ ಆಗಸ್ಟ್ ನಲ್ಲಿ ಅದು ಅಂತಿಮವಾಗಿ ಶೇ.10ಕ್ಕೇರಿತ್ತು.

                2022ರಲ್ಲಿ ಮತ್ತೊಮ್ಮೆ ಚಾಲ್ತಿ ಖಾತೆ ಕೊರತೆಯ ಆತಂಕದಲ್ಲಿ ಸರಕಾರವು ಜುಲೈನಲ್ಲಿ ಚಿನ್ನದ ಮೇಲಿನ ಆಮದು ಸುಂಕವನ್ನು ಶೇ.10.75ರಿಂದ ಶೇ.15ಕ್ಕೆ ಹೆಚ್ಚಿಸಿದೆ.

                ಚಿನ್ನವನ್ನು ಉತ್ಪಾದಿಸುವ ಅಥವಾ ಕಡಿಮೆ ತೆರಿಗೆ ನೀತಿಯನ್ನು ಹೊಂದಿರುವ ದೇಶಗಳಿಂದ ಚಿನ್ನವನ್ನು ಭಾರತಕ್ಕೆ ತರುವ ಕಳ್ಳಸಾಗಣೆದಾರರು ದರಗಳಲ್ಲಿಯ ಭಾರೀ ಅಂತರದಿಂದಾಗಿ ಲಾಭವನ್ನು ಮಾಡಿಕೊಳ್ಳುತ್ತಾರೆ. ಕಳ್ಳಸಾಗಣೆದಾರರಿಗೆ ತಮ್ಮ ಚಿನ್ನವು ಮಾರುಕಟ್ಟೆ ದರಕ್ಕಿಂತ ಅಗ್ಗವಾದಾಗ ಮಾತ್ರ ಲಾಭವಾಗುತ್ತದೆ. ಆದರೆ ವಿದೇಶ ಪ್ರಯಾಣಗಳನ್ನು ಮಾಡುವ ವ್ಯಕ್ತಿಗಳೂ ತಮ್ಮ ಪ್ರಯಾಣ ವೆಚ್ಚಗಳನ್ನು ಸರಿದೂಗಿಸಲು ಅಕ್ರಮವಾಗಿ ಚಿನ್ನವನ್ನು ಸಾಗಿಸುವ ಪ್ರಯತ್ನಗಳನ್ನು ಮಾಡುತ್ತಾರೆ. ದರ ವ್ಯತ್ಯಾಸವು ಹೆಚ್ಚಾಗಿರುವುದು ಇದಕ್ಕೆ ಕಾರಣವಾಗಿದೆ ಎನ್ನುತ್ತಾರೆ ಅಖಿಲ ಭಾರತ ರತ್ನ ಮತ್ತು ಚಿನ್ನಾಭರಣಗಳ ದೇಶಿಯ ಮಂಡಳಿಯ ಮಾಜಿ ಅಧ್ಯಕ್ಷ ಎನ್.ಅನಂತ ಪದ್ಮನಾಭನ್.

               ಕಳ್ಳಸಾಗಣೆಯನ್ನು ತಡೆಯಲು ಚಿನ್ನದ ಮೇಲಿನ ಆಮದು ಸುಂಕವನ್ನು ತಗ್ಗಿಸುವುದೊಂದೇ ದಾರಿ ಎಂದ ಪದ್ಮನಾಭನ್,ಸರಕಾರವು ಶೇ.5ರಷ್ಟು ಆಮದು ಸುಂಕವನ್ನು ತಗ್ಗಿಸಿದರೂ ಸಂಘಟಿತ ಚಿನ್ನ ಮಾರುಕಟ್ಟೆಯು ಸ್ಪರ್ಧಾತ್ಮಕ ದರದಲ್ಲಿ ಚಿನ್ನವನ್ನು ಪೂರೈಸಬಲ್ಲದು ಮತ್ತು ಇದು ಕಳ್ಳಸಾಗಣೆಯನ್ನು ಕಡಿಮೆ ಲಾಭದಾಯಕ ವ್ಯವಹಾರವನ್ನಾಗಿ ಮಾಡುತ್ತದೆ ಎಂದು ಹೇಳಿದರು.

            ಕಳ್ಳಸಾಗಣೆಗೆ ಕಡಿವಾಣ ಹಾಕಲು ಭಾರತದ ವ್ಯಾಪಾರ ಸಚಿವಾಲಯವು ಚಿನ್ನದ ಮೇಲಿನ ಆಮದು ಸುಂಕವನ್ನು ತಗ್ಗಿಸುವ ಬಗ್ಗೆ ಪರಿಶೀಲಿಸುತ್ತಿದೆ ಎಂದು ಬ್ಲೂಮ್ಬರ್ಗ್ ಈ ವಾರ ತನ್ನ ವರದಿಯಲ್ಲಿ ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries