ನವದೆಹಲಿ: ಭಾರತ-ಚೀನಾ ನಡುವೆ ಹೊಸದಾಗಿ ಗಡಿ ಸಂಘರ್ಷ ತಲೆಯೆತ್ತಿರುವ ನಡುವೆ, 2021ರಲ್ಲಿ ಅತಿಕ್ರಮಣಕ್ಕೆ ಯತ್ನಿಸಿದ್ದ ಚೀನಿ ಪಡೆಗಳನ್ನು ಭಾರತೀಯ ಯೋಧರು ದಿಟ್ಟತನದಿಂದ ಹಿಮ್ಮೆಟ್ಟಿಸಿದ್ದ ವಿಡಿಯೋ ದೃಶ್ಯ ಬಹಿರಂಗವಾಗಿದೆ. ವಾಸ್ತವ ನಿಯಂತ್ರಣ ರೇಖೆಯ (ಎಲ್ಎಸಿ) ಯಾಂಗ್ತ್ಸೆ ಸೆಕ್ಟರ್ ಬಳಿ ನಡೆದಿದ್ದ ಘಟನೆಯ ದೃಶ್ಯ ಇದೆಂದು ಹೇಳಲಾಗಿದೆ.
2020ರ ಜೂನ್ನಲ್ಲಿ ಪೂರ್ವ ಲಡಾಖ್ನ ಗಲ್ವಾನ್ ಕಣಿವೆಯಲ್ಲಿ ಉಭಯ ಕಡೆಗಳ ನಡುವೆ ನಡೆದ ಭೀಷಣ ಘರ್ಷಣೆಯ ನಂತರ ಈ ಪ್ರಕರಣ ನಡೆದಿತ್ತು ಎನ್ನಲಾಗಿದೆ. ಈ ವಿಡಿಯೋ ಡಿ. 9ರ ಘಟನೆಯದ್ದಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಭಾರತದ ಭಾಗವಾಗಿರುವ ಇಳಿಜಾರು ಪ್ರದೇಶವನ್ನು ಚೀನಿ ಸೈನಿಕರ ಅತಿಕ್ರಮಣ ಯತ್ನವನ್ನು ಭಾರತೀಯ ಯೋಧರು ಯಶಸ್ವಿಯಾಗಿ ವಿಫಲಗೊಳಿಸಿದ್ದನ್ನು ಈ ವಿಡಿಯೋ ತೋರಿಸುತ್ತದೆ. ಭಾರತೀಯ ಸೈನಿಕರು ಕೆಚ್ಚೆದೆಯಿಂದ ಹೋರಾಡಿ ಚೀನಿಯರನ್ನು ಸದೆಬಡಿದಿದ್ದು ಈ ದೃಶ್ಯದಲ್ಲಿ ಕಾಣಿಸುತ್ತದೆ. 'ಅವರನ್ನು ಗಟ್ಟಿಯಾಗಿ ಹೊಡಿ. ಅವರು ಮತ್ತೆ ಬರುವುದಿಲ್ಲ', 'ಅವರನ್ನು ಅಟ್ಟಿಸಿಕೊಂಡು ಹೋಗು' ಎಂದು ಯೋಧರು ಪಂಜಾಬಿ ಭಾಷೆಯಲ್ಲಿ ಕೂಗುತ್ತಿರುವುದು ವಿಡಿಯೋದಲ್ಲಿ ಇದೆ.
1990ರ ದಶಕದಿಂದ: ತವಾಂಗ್ನ ಯಾಂಗ್ತ್ಸೆ ಪ್ರದೇಶವನ್ನು ಅತಿಕ್ರಮಿಸಲು ಚೀನಾ 1990ರ ದಶಕದ ಅಂತ್ಯ ಭಾಗದಿಂದಲೂ ಪ್ರಯತ್ನಿಸುತ್ತಿದ್ದು, ಚಳಿಗಾಲಕ್ಕೆ ಮುಂಚೆ ಹಾಗೂ ನಂತರ, ಅಂದರೆ ವರ್ಷಕ್ಕೆರಡು ಬಾರಿ ಇಂಥ ಮುಖಾಮುಖಿ ಸಂಘರ್ಷ ನಡೆಯುವುದು ಸಾಮಾನ್ಯವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಯಾಂಗ್ತ್ಸೆ ಬಳಿ ಚೀನಾದ ಗಸ್ತು ತೀವ್ರಗೊಂಡಿದ್ದು 200ರಷ್ಟು ಸೈನಿಕರು ಮೊಳೆಗಳನ್ನು ಚುಚ್ಚಿರುವ ದೊಣ್ಣೆಗಳು ಮತ್ತು ಟೇಸರ್ ಗನ್ ಸಜ್ಜಿತರಾಗಿ ಬರುತ್ತಿದ್ದಾರೆ. ಕಳೆದ ವರ್ಷ ಅಕ್ಟೋಬರ್ನಲ್ಲಿ ಕೂಡ ಯಾಂಗ್ತ್ಸೆಯಲ್ಲಿ ಎಲ್ಎಸಿಯಲ್ಲಿ ಎರಡೂ ಕಡೆಗಳ ನಡುವೆ ಭಾರಿ ಕಾಳಗ ನಡೆದಿತ್ತು. ಚೀನಿ ಯೋಧರನ್ನು ಸ್ವಲ್ಪ ಸಮಯ ಬಂಧಿಸಿಟ್ಟು ಕೊಳ್ಳಲಾಗಿತ್ತು.
ಸಂಸತ್ನಲ್ಲಿ ಎರಡನೇ ದಿನವೂ ಗದ್ದಲ: ತವಾಂಗ್ನಲ್ಲಿ ಇತ್ತೀಚಿನ ಚೀನಿ ಅತಿಕ್ರಮಣದ ಬಗ್ಗೆ ಚರ್ಚೆಗೆ ಅವಕಾಶ ನೀಡದ್ದನ್ನು ಪ್ರತಿಭಟಿಸಿ ವಿರೋಧ ಪಕ್ಷಗಳು ಬುಧವಾರ ಸಂಸತ್ನಲ್ಲಿ ಸಭಾತ್ಯಾಗ ಮಾಡಿದವು. ಯಾವುದೇ ನೋಟಿಸ್ ಬಾರದಿರುವುದರಿಂದ ಈ ವಿಷಯದಲ್ಲಿ ಚರ್ಚೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ರಾಜ್ಯಸಭೆಯ ಉಪಾಧ್ಯಕ್ಷ ಹರಿವಂಶ್ ನೀಡಿದ ರೂಲಿಂಗ್ನಿಂದ ಕೆರಳಿದ ವಿಪಕ್ಷ ಸದಸ್ಯರು ಸದನದಿಂದ ಹೊರ ನಡೆದರು. ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿ ಮುಗಿದ ನಂತರ ಪ್ರತಿಪಕ್ಷಗಳು ಎಲ್ಎಸಿ ವಿಷಯವನ್ನು ಚರ್ಚೆ ಕೈಗೆತ್ತಿಕೊಳ್ಳಲು ಆಗ್ರಹಿಸಿದವು. ಈ ವಿಷಯವನ್ನು ಸದನದ ಕಲಾಪ ಸಲಹಾ ಸಮಿತಿಯಲ್ಲಿ ನಿರ್ಧರಿಸುವುದಾಗಿ ಹೇಳಿದ ಸ್ಪೀಕರ್ ಓಂ ಬಿರ್ಲಾ, ಚರ್ಚೆಗೆ ಅವಕಾಶ ನೀಡಲಿಲ್ಲ. ಆಗ ಪ್ರತಿಪಕ್ಷಗಳ ಸದಸ್ಯರು ಘೋಷಣೆ ಕೂಗಿ ಸದನದಿಂದ ಹೊರನಡೆದರು.
ಅಮೆರಿಕ ನಿಲುವು: ಡಿಸೆಂಬರ್ 9ರಂದು ತವಾಂಗ್ ಸೆಕ್ಟರ್ನಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ನಡೆದ ನಂತರ ಉಭಯ ಕಡೆಗಳವರು ಹಿಂದೆ ಸರಿದಿದ್ದು ಒಳ್ಳೆಯ ವಿಚಾರ ಎಂದು ಅಮೆರಿಕ ಸರ್ಕಾರ ಹೇಳಿದೆ. ಈ ವಿದ್ಯಮಾನವನ್ನು ನಿಕಟವಾಗಿ ಪರಿಶೀಲಿಸಲಾಗುತ್ತಿದೆ ಎಂದು ಶ್ವೇತ ಭವನ ತಿಳಿಸಿದೆ.
ತ್ರಿವಳಿ ಜಂಕ್ಷನ್ನಿಂದ ಅಪಾಯ: ಭಾರತಕ್ಕೆ ಸಾಮಾನ್ಯವಾಗಿ ತ್ರಿವಳಿ ಜಂಕ್ಷನ್ಗಳಿಂದ, ಅಂದರೆ ನೇಪಾಳ-ಟಿಬೆಟ್ ಗಡಿಯಲ್ಲಿರುವ ತವಾಂಗ್ ಮತ್ತು ಚುಂಬಿ ಕಣಿವೆ ಹಾಗೂ ಚೀನಾ-ಭೂತಾನ್ ಜಂಕ್ಷನ್ ಡೋಕ್ಲಾಂನಿಂದ ಅಪಾಯ ಎದುರಾಗುತ್ತಿದೆ.
ಹೊಸ ಮಿಲಿಟರಿ ಕ್ಯಾಂಪ್: ಅರುಣಾಚಲ ಪ್ರದೇಶ ಗಡಿಯಲ್ಲಿ ಚೀನಿ ಅತಿಕ್ರಮಣ ಯತ್ನದಿಂದ ಬಿಗುವು ಹೆಚ್ಚಿರುವ ಸಮಯದಲ್ಲೇ ಲಡಾಖ್ನಲ್ಲಿ ಕಾರ್ಯತಂತ್ರಾತ್ಮಕವಾಗಿ ಮಹತ್ವದ್ದಾದ ಪ್ಯಾಂಗಾಂಗ್ ತ್ಸೊ ಸರೋವರದ ಬಳಿಯ ಖುರ್ನಾಕ್ ಕೋಟೆಯ ಸಮೀಪ ಚೀನಾ ಹೊಸ ಮಿಲಿಟರಿ ನೆಲೆಯೊಂದನ್ನು ನಿರ್ವಿುಸಿರುವುದು ಬೆಳಕಿಗೆ ಬಂದಿದೆ. ಈ ಪ್ರದೇಶದಲ್ಲಿ ಪೂರ್ಣ ಪ್ರಮಾಣದ ಮಿಲಿಟರಿ ಮೂಲಸೌಕರ್ಯ ಕಟ್ಟಿರುವುದು ಉಪಗ್ರಹ ಚಿತ್ರಗಳಿಂದ ದೃಢಪಟ್ಟಿದೆ. 2020ರ ಜೂನ್ 15ರಿಂದ 2022 ಅಕ್ಟೋಬರ್ 24 ವರೆಗಿನ ಉಪಗ್ರಹ ಚಿತ್ರಗಳ ತುಲನೆ ಮಾಡಿದಾಗ ಆಘಾತಕಾರಿಯಾದ ಅಂಶ ಬಯಲಾಗಿದೆ. ಈ ಹೊಸ ನೆಲೆಯಲ್ಲಿ ಆಧುನಿಕ ವೈಮಾನಿಕ ರಕ್ಷಣಾ ವ್ಯವಸ್ಥೆ ಕೂಡ ಒಂದು ಚಿಕ್ಕ ಲ್ಯಾಂಡಿಂಗ್ ಗ್ರೌಂಡ್, ಬ್ಯಾಲಿಸ್ಟಿಕ್ ಶೆಲ್ಟರ್ ಇರುವುದು ಚಿತ್ರದಲ್ಲಿ ಕಾಣಿಸುತ್ತದೆ. ಕೆಲವು ಟ್ಯಾಂಕ್ಗಳು ಮತ್ತು ಯುದ್ಧ ವಿಮಾನಗಳು ಕೂಡ ಕಾಣಿಸಿವೆ. ಇಷ್ಟು ಮಾತ್ರವಲ್ಲದೆ, ತ್ವರಿತ ಓಡಾಟಕ್ಕಾಗಿ ಚೀನಾ ಎರಡು ಸೇತುವೆಗಳನ್ನು ಕೂಡ ನಿರ್ವಿುಸಿರುವುದು ತಿಳಿದು ಬಂದಿದೆ. ಈ ಮಧ್ಯೆ, ಯಾಂಗ್ತ್ಸೆ ಬಳಿಯ ಜಲಪಾತದ ಸಮೀಪ ವೀಕ್ಷಣಾ ಪಾಯಿಂಟ್ ನಿರ್ಮಾಣ ಸೇರಿದಂತೆ 13 ಮೂಲ ಸೌಕರ್ಯ ಯೋಜನೆಗೆ ಚೀನಾ ಮುಂದಾಗಿದೆ ಎನ್ನಲಾಗಿದೆ.
ಬೇಹು ನೌಕೆಯಿಂದ ನಿಗಾ: ಚೀನಾದ ಬೇಹುಗಾರಿಕೆ ನೌಕೆ ಯುವಾನ್ ವಾಂಗ್ 5, ಹಿಂದು ಮಹಾಸಾಗರದಲ್ಲಿ ಚೀನಿ ಜಲಾಂತರ್ಗಾಮಿಗಳ ಕಾರ್ಯಾಚರಣೆ ಸಂಬಂಧ ಭಾರತ ಪರಿಶೀಲನೆ ನಡೆಸುತ್ತಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕ್ಯಾಂಪ್ಬೆಲ್ ಕೊಲ್ಲಿ ಮತ್ತು ಲಕ್ಷದ್ವೀಪದಲ್ಲಿ ಮಿಲಿಟರಿ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಭಾರತ ಪ್ರಯತ್ನಿಸುತ್ತಿರುವಾಗ, ಚೀನಾ ಹಿಂದು ಮಹಾಸಾಗರದಲ್ಲಿ ತನ್ನ ನೌಕೆಯ ಸಂಚಾರ ಮುಂದುವರಿಸಿದೆ.