2023ಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ, 2022ರಲ್ಲ ಅನೇಕ ಘಟನೆಗಳು ಇತಿಹಾಸದ ಪುಟ ಸೇರಿವೆ. ಮಹಿಳೆಯರಿಗೆ ಸಂಬಂಧಿಸಿದಂತೆ ನೋಡುವುದಾದರೆ ಈ ವರ್ಷ ಅವರ ಶಕ್ತಿ ತುಂಬುವ ಕೆಲವೊಂದು ತೀರ್ಪುಗಳು ಬಂದಿವೆ.
ಜಗತ್ತು ಎಷ್ಟೇ ಮುಂದುವರೆದಿದ್ದರೂ ಮಹಿಳೆಯರ ಮೇಲಾಗುತ್ತಿರುವ ಶೋಷಣೆಗಳು ನಿಂತಿಲ್ಲ, ಎಷ್ಟೋ ಹೆಣ್ಮಕ್ಕಳ ಮೇಲೆ ಅತ್ಯಾಚಾರವಾಗುತ್ತಿದೆ, ಎಷ್ಟೋ ಹೆಣ್ಮಕ್ಕಳು ಕೌಟುಂಬಿಕ ಶೋಷಣೆಗೆ ಒಳಗಾಗುತ್ತಿದ್ದರೆ, ಇನ್ನುಕೆಲವೊಂದು ಅತ್ಯಾಚಾರ ಪ್ರಕರಣಗಳಲ್ಲಿ ಮಹಿಳೆ ಗರ್ಭಿಣಿಯಾದರೆ ಆ ಗರ್ಭ ಹೊತ್ತುಕೊಂಡು ತಾನು ಮಾಡದ ತಪ್ಪಿಗೆ ಜೀವನ ಪರ್ಯಾಂತ ಕಷ್ಟ ಅನುಭವಿಸಬೇಕಾಗುತ್ತದೆ.
ಈ ವಿಚಾರಗಳನ್ನು ನೋಡುವಾಗ ಈ ವರ್ಷ ಬಂದಿರುವ ತೀರ್ಪುಗಳು ಮಹಿಳೆಯರ ಪಾಲಿಗೆ ವರದಾನವಾಗಿದೆ.
ಈ ವರ್ಷ ಮಹಿಳೆಯರ ಪರವಾಗಿ ಬಂದ ತೀರ್ಪುಗಳ ಬಗ್ಗೆ ವಿವರವಾಗಿ ನೋಡುವುದಾದರೆ:
1. ಒಪ್ಪಿಗೆಯಿಲ್ಲದ ಲೈಂಗಿಕ ಕ್ರಿಯೆ ಅತ್ಯಾಚಾರ (Marital rape is rape )
ಪತ್ನಿಯ ಮೇಲೆ ಗಂಡ ಲೈಂಗಿಕ ದೌರ್ಜನ್ಯ ನಡೆಸಿದರೆ ಅದನ್ನು ಅತ್ಯಾಚಾರ ಎಂದು ಪರಿಗಣಿಸಲಾಗುವುದು ಎಂದು ಕೋರ್ಟ್ ತೀರ್ಪು ನೀಡಿದೆ.
MTP(ವೈದ್ಯಕೀಯ ವಿಧಾನದಲ್ಲಿ ಗರ್ಭಪಾತ ಮಾಡಿಸುವುದು) ಕಾಯ್ದೆ ಪ್ರಕಾರ ಲೈಂಗಿಕ ದೌರ್ಜನ್ಯದಿಂದ ಗರ್ಭಧರಿಸಿದರೆ ಗರ್ಭಪಾತ ಮಾಡಿಸಬಹುದಾದ ಹಕ್ಕನ್ನು ಮಹಿಳೆಗೆ ನೀಡಿದೆ.
2. ಸುರಕ್ಷಿತ ಹಾಗೂ ಕಾನೂನಾತ್ಮಕವಾಗಿ ಗರ್ಭಪಾತ ಮಾಡಿಸುವುದು ಪ್ರತಿಯೊಬ್ಬ ಮಹಿಳೆಯ ಹಕ್ಕು
ಇದು ಮಹಿಳೆಯರ ಪರವಾಗಿ ಬಂದಂಥ ಮತ್ತೊಂದು ಮಹತ್ವದ ತೀರ್ಪಾಗಿದೆ. ಇದರ ಪ್ರಕಾರ ದೇಶದಲ್ಲಿರುವ ಎಲ್ಲಾ ಮಹಿಳೆಯರು ಗರ್ಭ ಧರಿಸಿದ 20-24 ವಾರಗಳ ಒಳಗಾಗಿ ತಾವು ಇಚ್ಛೆಪಟ್ಟರೆ ಗರ್ಭಪಾತ ಮಾಡಿಸುವ ಹಕ್ಕನ್ನು ಹೊಂದಿದ್ದಾರೆ. ವಿವಾಹಿತ ಹಾಗೂ ಅವಾಹಿತ ಮಹಿಳೆಯರಿಗೆ ಈ ಕಾನೂನು ಅನ್ವಯಿಸುತ್ತದೆ.
ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ, ಎಎಸ್ ಬೋಪಣ್ಣ, ಜೆ ಬಿ ಪಾರ್ಡಿವಾಲಾ ಸೆಪ್ಟೆಂಬರ್ 29ಕ್ಕೆ ಮಹತ್ವದ ತೀರ್ಪು ಪ್ರಕಟಿಸಿ ಮಹಿಳೆ ವಿವಾಹಿತಳೇ ಎಂಬ ಆಧಾರದ ಮೇಲೆ ತಾರತಮ್ಯ ಮಾಡುವುದು ಮಹಿಳೆಯರ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. 2003ರ ರೂಲ್ 3B ಪ್ರಕಾರ ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಮಾತ್ರ ಗರ್ಭಪಾತಕ್ಕೆ ಅವಕಾಶ ನೀಡಲಾಗುತ್ತಿತ್ತು.
ಈ ತೀರ್ಪು ಜಾರಿಗೆ ಬಂದ ಹಿನ್ನೆಲೆ: 25 ವರ್ಷದ ಅವಾಹಿತ ಮಹಿಳೆಯೊಬ್ಬರು ತಾನು 23 ವಾರಗಳ ಗರ್ಭಿಣಿಯಾಗಿದ್ದು ಗರ್ಭಪಾತಕ್ಕೆ ಅವಕಾಶ ನೀಡಬೇಕೆಂದು ದೆಹಲಿ ಹೈ ಕೋರ್ಟ್ ಮೊರೆ ಹೋಗಿದ್ದಳು, ಆದರೆ ದೆಹಲಿ ಹೈ ಕೋರ್ಟ್ ಸಮ್ಮತಿಸಿರಲಿಲ್ಲ. ನಮ್ಮ ಸಂಗಾತಿ ಮದುವೆಯಾಗುವುದಾಗಿ ಹೇಳಿ ಮೋಡ ಮಾಡಿದ್ದಾನೆ, ಕೊನೆಯ ಹಂತದಲ್ಲಿ ಕೈಕೊಟ್ಟಿರುವುದರಿಂದ ಗರ್ಭಪಾತ ಮಾಡಿಸಲು ಅನುಮತಿ ಕೋರಿದ್ದಳು.
ಈ ಮಹಿಳೆ ಸುಪ್ರೀಂಕೋರ್ಟ್ ಮೊರೆ ಹೋದಾಗ ಯಾವುದೇ ಮಹಿಳೆ ಬಯಸಿದ್ದಲ್ಲಿ 20-24 ವಾರಗಳ ಒಳಗೆ ಗರ್ಭಪಾತ ಮಾಡಿಸಬಹುದೆಂದು ಉಚ್ಛ ನ್ಯಾಯಾಲಯ ಹೇಳಿದೆ.
3 ಮಗುವಿನ ಸರ್‌ನೇಮ್ ತಾಯಿ ನಿರ್ಧರಿಸಬಹುದು
ಭಾರತ ಪಿತೃ ಪ್ರಧಾನ ಸಮಾಜ. ಇಲ್ಲಿ ಮಕ್ಕಳು ಜನಿಸಿದಾಗ ಅವರ ಸರ್‌ನೇಮ್ ತಂದೆಯ ಸರ್‌ನೇಮ್‌ನಿಂದ ಗುರುತಿಸಲಾಗುವುದು. ಇದೀಗ ಮಗುವಿಗೆ ಯಾವ ಸರ್‌ನೇಮ್ ಇಡಬೇಕು ಎಂದು ನಿರ್ಧರಿಸುವ ಹಕ್ಕು ತಾಯಿಗಿದೆ ಎಂಬ ತೀರ್ಪು ಬಂದಿದೆ. ತಾಯಿ ಮಕ್ಕಳ ನೈಸರ್ಗಿಕವಾದ ಪೋಷಕಿಯಾಗಿರುವುದರಿಂದ ತನ್ನ ಮಗುವಿಗೆ ಯಾವ ಸರ್‌ನೇಮ್ ಇಡಬೇಕು ಎಂದು ನಿರ್ಧರಿಸುವ ಹಕ್ಕು ಅವಳಿಗಿದೆ. ಒಂದು ವೇಳೆ ಗಂಡ ತೀರಿ ಹೋಗಿ, ಅವಳು ಬೇರೆ ಮದುವೆಯಾಗಿದ್ದರೆ ಮೊದಲ ಗಂಡನಿಂದ ಜನಿಸಿದ ಮಗುವಿಗೆ ತಾನು ಇಚ್ಛೆ ಪಟ್ಟರೆ ಹೊಸ ಕುಟುಂಬದ ಸರ್‌ನೇಮ್ ಇಡಬಹುದಾಗಿದೆ.
5. ಮನೆ ಕಟ್ಟಲು ಹಣ ಕೇಳಿದರೆ ಅದು ಕೂಡ ವರದಕ್ಷಿಣೆ
ಮಗಳು ತನ್ನ ಪೋಷಕರ ಬಳಿ ಅತ್ತೆ ಮನೆಯವರಿಗೆ ಮನೆ ಕಟ್ಟಲು ಹಣ ಕೇಳಿದರೆ ಅದು ಕೂಡ ವರಕ್ಷಿಣೆಯಾಗುವುದು. ವರದಕ್ಷಿಣೆಗೆ ಸಂಬಂಧಿಸಿದ ಸಾವಿನ ಕೇಸ್ ಪ್ರಕರಣದಲ್ಲಿ ಕೋರ್ಟ್ ಇಂಥದ್ದೊಂದು ತೀರ್ಪು ನೀಡಿದೆ.
ಅತ್ತೆ ಮನೆಯವರು ಅಥವಾ ಗಂಡ ಮನೆಕಟ್ಟಲು ಸೊಸೆ ಅಥವಾ ಪತ್ನಿ ಬಳಿ ಹಣ ಕೇಳುವುದು ವರದಕ್ಷಿಣೆ ಕಾಯ್ದೆ ಪ್ರಕಾರ ಅಪರಾಧವಾಗಿದೆ.
ಮನೆಕಟ್ಟಲು ಹಣ ಕೇಳಿದ್ದಕ್ಕೆ ಮಹಿಳೆ ಸಾವನ್ನಪ್ಪಿದ ಕೇಸ್‌ನಲ್ಲಿ ಮನೆ ಕಟ್ಟಲು ಹಣ ಕೇಳಿದರೆ ಅದು ವರದಕ್ಷಿಣೆಯಲ್ಲ ಎಂದು ಹೈ ಕೋರ್ಟ್ ಹೇಳಿತ್ತು. ಈ ಕೋರ್ಟ್‌ನ ತೀರ್ಪು ಪ್ರಶ್ನಿಸಿದ ಸುಪ್ರೀಂ ಕೋರ್ಟ್ ಮನೆ ಕಟ್ಟಲು ಹಣ ಕೇಳಿದರೂ ಅದು ವರದಕ್ಷಿಣೆ ಎಂಬುವುದಾಗಿ ಹೇಳಿದೆ.