ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) 2022ರಲ್ಲಿ ಬರೋಬ್ಬರಿ 73 ಭಯೋತ್ಪದನಾ ಪ್ರಕರಣಗಳನ್ನು ದಾಖಲಿಸಿ, "ಸಾರ್ವಕಾಲಿಕ ದಾಖಲೆ" ಸೃಷ್ಟಿಸಿದೆ. 2021ರಲ್ಲಿ ದಾಖಲಾದ 61 ಪ್ರಕರಣಗಳಿಗಿಂತ ಈ ಬಾರಿ ಶೇ. 19.67 ರಷ್ಟು ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಇದು ಎನ್ಐಎ ಇತಿಹಾಸದಲ್ಲೇ ಅತೀ ಹೆಚ್ಚು.
ದೇಶಕ್ಕೆ ಹಾನಿ ಮಾಡುವ ಗುರಿಯನ್ನು ಹೊಂದಿರುವ ಭಯೋತ್ಪಾದಕ ಜಾಲಗಳನ್ನು ಕಿತ್ತೊಗೆಯಲು ರಾಷ್ಟ್ರೀಯ ತನಿಖಾ ಸಂಸ್ಥೆ ಕೆಲಸ ಮಾಡುತ್ತಿದೆ ಎಂದು ಎನ್ಐಎ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆ ತನ್ನ ಕ್ರಮದ ವರ್ಷಾಂತ್ಯದ ಅಂಕಿಅಂಶಗಳನ್ನು ಇಂದು ಬಿಡುಗಡೆ ಮಾಡಿದ್ದು, ಈ ವರ್ಷ ಒಟ್ಟು 73 ಭಯೋತ್ಪಾದನಾ ಪ್ರಕರಣಗಳನ್ನು ದಾಖಲಿಸಿದೆ. ಈ ಪೈಕಿ ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ, ಬಿಹಾರ, ದೆಹಲಿ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ತೆಲಂಗಾಣ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಜಿಹಾದಿ ಉಗ್ರಗಾಮಿತ್ವದ 35 ಪ್ರಕರಣಗಳು ಸೇರಿವೆ ಎಂದು ಮಾಹಿತಿ ನೀಡಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿತ 11 ಪ್ರಕರಣಗಳು, ಎಡಪಂಥೀಯ ಉಗ್ರವಾದ(LWE)ಕ್ಕೆ ಸಂಬಂಧಿಸಿದ 10 ಪ್ರಕರಣಗಳು, NE ನಲ್ಲಿ 5 ಪ್ರಕರಣಗಳು ಪ್ರಕರಣಗಳು ಸೇರಿವೆ. ಇನ್ನು 7 PFI ಸಂಬಂಧಿತ ಪ್ರಕರಣಗಳು, ಪಂಜಾಬ್‌ನ 5 ಪ್ರಕರಣಗಳು ಒಳಗೊಂಡಿದ್ದು, ಈ ಪೈಕಿ ದರೋಡೆಕೋರ-ಭಯೋತ್ಪಾದನೆ-ಮಾದಕ ಕಳ್ಳಸಾಗಣೆದಾರರ ಸಂಬಂಧದ 3 ಪ್ರಕರಣಗಳು ಇವೆ. ಭಯೋತ್ಪಾದಕ-ಧನಸಹಾಯದ 1 ಪ್ರಕರಣ ಮತ್ತು 2 ಎಫ್‌ಐಸಿಎನ್ ಸಂಬಂಧಿತ ಪ್ರಕರಣಗಳು ಸೇರಿವೆ ಎಂದು ಎನ್ಐಎ ವಕ್ತಾರರು ತಿಳಿಸಿದ್ದಾರೆ.
ಎನ್ಐಎ 2019 ಮತ್ತು 2020ರಲ್ಲಿ ಸರಾಸರಿ 60 ಪ್ರಕರಣಗಳನ್ನು ದಾಖಲಿಸಿತ್ತು ಎಂದು ಅವರು ಹೇಳಿದ್ದಾರೆ.