ನವದೆಹಲಿ : ಭೌಗೋಳಿಕ ರಾಜಕೀಯ ಅಸ್ಥಿರತೆಯ ನಡುವೆ 2023 ರಲ್ಲಿ ಹಳದಿ ಲೋಹ ತನ್ನ ಹೊಳಪನ್ನು
ಉಳಿಸಿಕೊಳ್ಳಲಿದುದ್, ಪ್ರತಿ 10 ಗ್ರಾಮ್ ಬೆಲೆ 60,000 ರೂಪಾಯಿ ವರೆಗೂ ತಲುಪಲಿದೆ ಎಂದು
ವಿಶ್ಲೇಷಿಸಲಾಗುತ್ತಿದೆ.
ಮಾರುಕಟ್ಟೆ ತಜ್ಞರ ಪ್ರಕಾರ, ಅತ್ಯಂತ ಅಸ್ಥಿರ ವರ್ಷದಲ್ಲಿ ಅಂತರಾಷ್ಟ್ರೀಯ
ಮಾರುಕಟ್ಟೆಯಲ್ಲಿ ಚಿನ್ನದ ದರ ಮಾರ್ಚ್ ನಲ್ಲಿ ಗರಿಷ್ಠ ಪ್ರತಿ ಔನ್ಸ್ ಗೆ 2,070 ಡಾಲರ್
ಗೆ ಹಾಗೂ ನವೆಂಬರ್ ನಲ್ಲಿ ಕನಿಷ್ಠ ಪ್ರತಿ ಔನ್ಸ್ ಗೆ 1,616 ಕ್ಕೆ ಏರಿಳಿತ
ದಾಖಲಿಸಿತ್ತು, ಆಗಿನಿಂದ ಚಿನ್ನದ ಬೆಲೆಯಲ್ಲಿ ಸ್ಥಿರತೆ ಉಂಟಾಗಿದೆ.
2022 ರ ಪ್ರಾರಂಭದಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್ ಗೆ 1,800 ಡಾಲರ್ ಗಳಷ್ಟಿತ್ತು. ಈಗ ಪ್ರತಿ ಔನ್ಸ್ ಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ 1,803 ಡಾಲರ್ ಗಳಷ್ಟಾಗಿದ್ದು ಪ್ರತಿ 10 ಗ್ರಾಮ್ ಚಿನ್ನಕ್ಕೆ 54,790 ರೂಪಾಯಿಗಳಷ್ಟಾಗಿದೆ.
ಭೌಗೋಳಿಕ ರಾಜಕೀಯದ ಬೆಳವಣಿಗೆಗಳು, ರಿಸಿಷನ್ ಭೀತಿ, ಹಣದುಬ್ಬರ ಟ್ರೆಂಡ್, ಕ್ರಿಪ್ಟೋ ಆಸ್ತಿಗಳೆಡೆಗೆ ಕುಗ್ಗಿದ ಆಸಕ್ತಿಗಳನ್ನು ಗಮನಿಸಿದರೆ, ಚಿನ್ನದ ದರ ಮುಂದಿನ ದಿನಗಳಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಅಸ್ಥಿರತೆಯ ಸಂದರ್ಭಗಳಲ್ಲಿ ಚಿನ್ನದ ಮೇಲಿನ ಹೂಡಿಕೆ ಅತ್ಯಂತ ನಂಬಿಕೆಯುಳ್ಳದ್ದು ಎಂದು ಹೇಳಲಾಗುತ್ತದೆ.
2023 ರಲ್ಲಿ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 1,670-2,000 ಡಾಲರ್ ಗೆ ಏರಿಕೆಯಾಗುವ ಸಾಧ್ಯತೆ ಇದ್ದು, ಎಂಸಿಎಕ್ಸ್ ಚಿನ್ನ 48,500-60,000 ರೂಪಾಯಿಗಳಿಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಕೋಟಕ್ ಸೆಕ್ಯುರಿಟೀಸ್ ನ ಉಪಾಧ್ಯಕ್ಷ ಹಾಗೂ ಸರಕು ಸಂಶೋಧನೆಯ ಮುಖ್ಯಸ್ಥರಾದ ರವೀಂದ್ರ ವಿ ರಾವ್ ಹೇಳಿದ್ದಾರೆ.
2023 ರಲ್ಲಿ ಚಿನ್ನದ ಬೇಡಿಕೆ ಚೇತರಿಸಿಕೊಳ್ಳುವ ಸಾಧ್ಯತೆ ಇದೆ. ಯುಎಸ್ ಫೆಡರಲ್ ರಿಸರ್ವ್ ನ ಬಡ್ಡಿ ದರಗಳ ಪರಿಷ್ಕರಣೆ ಚಿನ್ನದ ಬೆಲೆಯ ಮೇಲೆ ಮೊದಲ ತ್ರೈಮಾಸಿಕದಲ್ಲಿ ಕರಿನೆರಳು ಬೀರುವ ಸಾಧ್ಯತೆ ಇದೆ.