ನವದೆಹಲಿ : 2023ರ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಜಿ20 ಶೃಂಗಸಭೆ ಹಿನ್ನೆಲೆಯಲ್ಲಿ ಕಾರ್ಯತಂತ್ರಗಳ ಚರ್ಚೆ ಹಾಗೂ ಪೂರಕವಾಗಿ ಸಲಹೆಗಳನ್ನು ಪಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಸೋಮವಾರ ಸರ್ವಪಕ್ಷಗಳ ಸಭೆ ಕರೆದಿದೆ. ಭಾರತವು ಈ ಶೃಂಗಸಭೆಯ ಆತಿಥ್ಯವನ್ನು ವಹಿಸಲಿದೆ.
ರಾಷ್ಟ್ರಪತಿ ಭವನದಲ್ಲಿ ಸರ್ವಪಕ್ಷಗಳ ಸಭೆ ನಡೆಯಲಿದ್ದು, 40 ಪಕ್ಷಗಳ ಅಧ್ಯಕ್ಷರಿಗೆ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಷಿ ಆಹ್ವಾನ ನೀಡಿದ್ದಾರೆ. ಪ್ರಧಾನಿ ಮೋದಿ ಸಭೆಯಲ್ಲಿ ಭಾಗವಹಿಸುವರು. ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರೂ ಪಾಲ್ಗೊಳ್ಳುವ ಸಂಭವವಿದೆ.
ಸರ್ವಪಕ್ಷಗಳ ಸಭೆಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಾಲ್ಗೊಳ್ಳುವ ಸಂಭವ
ವಿದೆ. ತೃಣಮೂಲ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆಯಾಗಿ ಭಾಗವಹಿಸುತ್ತಿದ್ದೇನೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಭಾರತವು ಡಿ.1ರಂದು ಜಿ20 ಶೃಂಗದ ಅಧ್ಯಕ್ಷತೆ ವಹಿಸಿಕೊಂಡಿದೆ. ಪೂರಕವಾಗಿ ದೇಶದ ವಿವಿಧೆಡೆ 200 ಸಭೆಗಳನ್ನು ಆಯೋಜಿಸುವ ನಿರೀಕ್ಷೆಯಿದೆ. ಮೊದಲ ಸಭೆಯು ಹೈದರಾಬಾದ್‌ನಲ್ಲಿ ನಡೆಯಲಿದೆ.
ಜಿ20 ಭಾರತ ಸೇರಿ ವಿಶ್ವದ ಪ್ರಮುಖ ದೇಶಗಳು ಸದಸ್ಯರಾಗಿರುವ ಅಂತರರಾಷ್ಟ್ರೀಯ ವೇದಿಕೆಯಾಗಿದೆ. ಜಿ20 ಶೃಂಗದ ಮುಂದಿನ ಸಭೆ 2023ರ ಸೆಪ್ಟೆಂಬರ್ 9 ಮತ್ತು 10ರಂದು ನವದೆಹಲಿಯಲ್ಲಿ ನಡೆಯಲಿದೆ.