ನವದೆಹಲಿ: ನ್ಯಾಯಾಲಯ ಕಲಾಪಗಳ ನೇರ ಪ್ರಸಾರ ವೀಕ್ಷಣೆ ಸಾಧ್ಯವಾಗಿಸುವ ಆಂಡ್ರಾಯ್ಡ್ 2.0 ಆವೃತ್ತಿಯ ಮೊಬೈಲ್ ಅಪ್ಲಿಕೇಶನ್ ಅನ್ನು ಸುಪ್ರೀಂ ಕೋರ್ಟ್ ಬುಧವಾರ ಆರಂಭಿಸಿದೆ.
ವಕೀಲರು, ನ್ಯಾಯಾಂಗದ ಅಧಿಕಾರಿಗಳು, ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳ ನೋಡಲ್ ಅಧಿಕಾರಿಗಳು ನ್ಯಾಯಾಲಯ ಕಲಾಪದ ನೇರ ಪ್ರಸಾರವನ್ನು ತಮ್ಮ ಮೊಬೈಲ್‌ಗಳಲ್ಲೇ ಈ ಅಪ್ಲಿಕೇಶನ್ ಮೂಲಕ ವಿಕ್ಷಿಸಬಹುದಾಗಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ದಿನದ ಕಲಾಪ ಆರಂಭಿಸುವ ಮೊದಲು, 'ಈ ಮೊಬೈಲ್ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು. ಐಒಎಸ್ ಆವೃತ್ತಿ ಒಂದು ವಾರದೊಳಗೆ ಲಭ್ಯವಾಗಲಿದೆ' ಎಂದು ಪ್ರಕಟಿಸಿದರು.
'ಈ ಅಪ್ಲಿಕೇಶನ್ ಮೂಲಕ ಲಾಗ್ ಇನ್ ಆದರೆ ಪ್ರಕರಣಗಳ ವಿಚಾರಣೆಯನ್ನು ವೀಕ್ಷಿಸಬಹುದು. ಕೇಂದ್ರ ಸಚಿವಾಲಯಗಳ ಕಾನೂನು ಅಧಿಕಾರಿಗಳು ಮತ್ತು ನೋಡಲ್ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಪ್ರಕರಣಗಳ ಸ್ಥಿತಿಗತಿ, ಆದೇಶಗಳು, ತೀರ್ಪುಗಳು ಮತ್ತು ಬಾಕಿ ಇರುವ ಪ್ರಕರಣಗಳ ಮಾಹಿತಿಯನ್ನೂ ತಿಳಿಯಬಹುದು' ಎಂದು ಹೇಳಿದರು.