ಬದಿಯಡ್ಕ: ತನ್ನ ಜಾಗದ ದಾಖಲೆ ಸರಿಪಡಿಸಿಕೊಡುವಂತೆ ವಿಶಿಷ್ಟ ಪ್ರತಿಭಟನೆಯ ಮೂಲಕ ಅಧಿಕಾರಿಗಳ ಗಮನ ಸೆಳೆಯಲು ಯತ್ನಿಸುತ್ತಿರುವ ಮವ್ವಾರು ನಿವಾಸಿ, ಪಿ.ಕೆ ಮೋಹನ್‍ದಸ್ ಮತ್ತೆ ಮೊಬೈಲ್ ಟವರ್ ಏರಿ ಪ್ರತಿಭಟನೆ ನಡೆಸಿದ್ದಾರೆ.
ಸೋಮವಾರ ಬದಿಯಡ್ಕ ಪೇಟೆಯಲ್ಲಿ ಘಟನೆ ನಡೆದಿದೆ. ಮೊಬೈಲ್ ಟವರ್ ಏರಿ ಕುಳಿತ ಮೋಹನ್‍ದಸ್ ಅವರು ತನ್ನ ಪತ್ನಿ ಹೆಸರಿನ ಜಾಗದ ದಾಖಲೆಪತ್ರ ಸರಿಪಡಿಸಿ ನೀಡದಿದ್ದಲ್ಲಿ ತಾನು ಕೆಳಗಿಳಿಯಲಾರೆ. ಈ ಹಿಂದೆ ಹಲವು ಬಾರಿ ಅಧಿಕಾರಿಗಳು ನೀಡಿದ್ದ ಭರವಸೆ ಈಡೇರಿಸದೆ ವಂಚಿಸಿದ್ದಾರೆ. ನನ್ನನ್ನು ಇಳಿಸುವ ಪ್ರಯತ್ನಕ್ಕೆ ಮುಂದಾದಲ್ಲಿ ಬೆಟ್ರೋಲ್ ಸುರಿದು ಬೆಂಕಿ ಹಚ್ಚಿ ಆತ್ಮಹತ್ಯೆಗೈಯುವುದಾಗಿ ಬೆದರಿಕೆಯೊಡ್ಡಿದ್ದಾರೆ. ಟವರ್ ಮೇಲೆ ಬಟ್ಟೆ ಬಿಗಿದು ಇದರಲ್ಲಿ ಕುಳಿತು ತಮ್ಮ ದರಣಿ ಮುಂದುವರಿಸಿದ್ದರು. ಅಗ್ನಿಶಾಮಕ ದಳ, ಪೊಲೀಸ್, ಕಂದಾಯ ಅಧಿಕಾರಿಗಳು, ಶಾಸಕರು ಸ್ಥಳಕ್ಕಾಗಮಿಸಿ ಕೇಳಿಕೊಂಡರೂ, ಪಟ್ಟು ಬಿಡದೆ ಟವರ್ ಮೇಲೆ ತಮ್ಮ ಧರಣಿ ಮುಂದುವರಿಸಿದ್ದಾರೆ. ಶಾಸಕ ಎನ್.ಎ ನೆಲ್ಲಿಕುನ್ನು ಮನವಿ ಮಾಡಿ, ಕೆಳಗಿಳಿದಲ್ಲಿ ದಾಖಲೆಗಳನ್ನು ಪರಿಗಣಿಸುವ ಭರವಸೆಗೂ ಮೋಹನ್‍ದಾಸ್ ಜಗ್ಗಲಿಲ್ಲ. ಹಲವರು ಮೊಬೈಲ್ ಮೂಲಕ ಇವರನ್ನು ಸಂಪರ್ಕಿಸಿ ಧರಣಿ ಕೈಬಿಡುವಂತೆ ಕೇಳಿಕೊಂಡರೂ ಪ್ರಯೋಜನವಾಗಿಲ್ಲ. ಕೊನೆಗೆ ಯುವಕರಿಬ್ಬರು ಆಹಾರ ನೀಡುವ ನೆಪದಲ್ಲಿ ಮೇಲಕ್ಕೇರಿ ಕೈಯಲ್ಲಿದ್ದ ಪೆಟ್ರೋಲ್ ಬಾಟಲಿ ದೂರಕ್ಕೆ ಎಸೆದಿದ್ದು, ಬಿಗಿಯಾಗಿ ಹಿಡಿದುಕೊಂಡಿದ್ದರೆ. ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿಯೂ ಟವರ್ ಏರಿ ಇವರನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
70ರ ಹರೆಯದ ಮೋಹನ್‍ದಾಸ್ ಅವರು ಕಳೆದ 22ವರ್ಷಗಳಿಂದ ಈ ರೀತಿಯ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವ ಮೂಲಕ ತಮ್ಮ ಪತ್ನಿ ಹೆಸರಲ್ಲಿರುವ ಜಾಗಕ್ಕೆ ಸಂಬಂಧಿಸಿದ ದಾಖಲೆ ಸರಿಪಡಿಸುವಂತೆ ಆಗ್ರಹಿಸುತ್ತಾ ಬಂದಿದ್ದಾರೆ. ಕೊನೆಗೂ ಅಧಿಕಾರಿಗಳು ಇವರ ಜಾಗಕ್ಕೆ ಸಂಬಂಧಿಸಿದ ದಾಖಲೆ ಪರಿಶೀಲಿಸುವ ಭರವಸೆ ನೀಡಿದ್ದಾರೆ.