ನವದೆಹಲಿ: 'ಗೇಮಿಂಗ್ ಕಂಪನಿಗಳು 2019ರ ಏಪ್ರಿಲ್‌ನಿಂದ 2022ರ ನವೆಂಬರ್ ಅವಧಿಯಲ್ಲಿ ಒಟ್ಟು ₹23 ಸಾವಿರ ಕೋಟಿಗೂ ಹೆಚ್ಚು ಜಿಎಸ್‌ಟಿ ವಂಚಿಸಿವೆ. ತೆರಿಗೆ ಅಧಿಕಾರಿಗಳು ಈ ಸಂಬಂಧ ತನಿಖೆ ನಡೆಸುತ್ತಿದ್ದಾರೆ' ಎಂದು ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಪಂಕಜ್ ಚೌಧರಿ ಸೋಮವಾರ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿರುವ ಅವರು, 'ದೇಶ ಹಾಗೂ ವಿದೇಶದಲ್ಲಿನ ಗೇಮಿಂಗ್ ಕಂಪನಿಗಳು ₹22,936 ಕೋಟಿ ಜಿಎಸ್‌ಟಿ ವಂಚಿಸಿವೆ. ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿಯು (ಸಿಬಿಐಸಿ) ತನಿಖಾ ತಂಡ ಚಿಸಿದ್ದು ಅದು ತನಿಖೆ ಆರಂಭಿಸಿದೆ' ಎಂದಿದ್ದಾರೆ.
'ಜಾರಿ ನಿರ್ದೇಶನಾಲಯವು (ಇ.ಡಿ) ಸೈಬರ್ ಮತ್ತು ಕ್ರಿಪ್ಟೊ ಕರೆನ್ಸಿ ವಂಚನೆ ಪ್ರಕರಣದ ತನಿಖೆ ಕೈಗೊಂಡಿದೆ. ಈ ಸಂಬಂಧ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ಡಿಸೆಂಬರ್ 6ರ ವೇಳೆಗೆ ₹1 ಸಾವಿರ ಕೋಟಿಗೂ ಅಧಿಕ ಸ್ವತ್ತುಗಳನ್ನು ಜಪ್ತಿ ಮಾಡಲಾಗಿದೆ. ಪಿಎಂಎಲ್‌ಎ ವಿಶೇಷ ನ್ಯಾಯಾಲಯದಲ್ಲಿ ಒಟ್ಟು 12 ಪ್ರಕರಣಗಳನ್ನು ದಾಖಲಿಸಲಾಗಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ (ಫೆಮಾ) ಸೆಕ್ಷನ್ 37ಎ ಅಡಿಯಲ್ಲಿ ಒಟ್ಟು ₹289.28 ಕೋಟಿ ಮೌಲ್ಯದ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ' ಎಂದು ಮಾಹಿತಿ ನೀಡಿದ್ದಾರೆ.