ನವದೆಹಲಿ: ಈ ವರ್ಷ ಡಿಸೆಂಬರ್ 8ರ ವೇಳೆಗೆ ದೇಶದಲ್ಲಿ ಮಂಕಿಪಾಕ್ಸ್‌ನ 23 ದೃಢಪಟ್ಟಿರುವ ಪ್ರಕರಣಗಳು ವರದಿಯಾಗಿವೆ ಎಂದು ಗೃಹ ಖಾತೆ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್ ಅವರು ಮಂಗಳವಾರ ರಾಜ್ಯಸಭೆಗೆ ತಿಳಿಸಿದರು.
ದೇಶದಲ್ಲಿ ಕೋವಿಡ್-19 ಸಾಂಕ್ರಮಿಕದ ಸದ್ಯದ ಸ್ಥಿತಿಗತಿ ಕುರಿತು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ನೀಡಿರುವ ಮಾಹಿತಿ ಆಧಾರದಲ್ಲಿ ಸದ್ಯ ದೇಶದಲ್ಲಿ 4,244 ಕೋವಿಡ್ ಸಕ್ರಿಯ ಪ್ರಕರಣಗಳು ಇವೆ.
2022ರ ಜುಲೈ ಮಧ್ಯವಾರದಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ನಿಧಾನವಾಗಿ ಕಡಿಮೆಯಾಗುತ್ತಿದೆ ಎಂದು ಅವರು ಹೇಳಿದರು.
ವೈರಾಣುವಿನ ಹೊಸ ತಳಿಗಳಿಂದಾಗಿ ಹರಡಬಹುದಾದ ಕಾಯಿಲೆಗಳು ಮತ್ತು ಅದರ ಪರಿಣಾಮಗಳ ಕುರಿತು ಸರ್ಕಾರವು ಕೂಲಂಕಷವಾದ ಅಧ್ಯಯನ ನಡೆಸುತ್ತಿದೆಯೇ ಎಂಬ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಅವರು, ಆರೋಗ್ಯ ಸಂಶೋಧನಾ ಇಲಾಖೆಯು ದೇಶದಾದ್ಯಂತ 145 ವೈರಾಣು ಸಂಶೋಧನೆ ಮತ್ತು ರೋಗನಿರ್ಣಯ ಪ್ರಯೋಗಾಲಯಗಳ (ವಿಆರ್‌ಡಿಎಲ್) ಜಾಲ ಹೊಂದಿದೆ. ಕೊರೊನಾ ವೈರಾಣು ಜೊತೆ ನಿಫಾ, ಡೆಂಗಿ, ಜೀಕಾ, ಚಿಕೂನ್‌ಗುನ್ಯ, ಪೋಲಿಯೊ, ಜಾಪಾನೀಸ್ ಎನ್ಸೆಫಾಲಿಟಿಸ್, ಇಫ್ಲುಯೆನ್ಝಾ ಮತ್ತಿತರ ಕಾಯಿಲೆ ಹರಡುವ ವೈರಾಣುಗಳ ಕುರಿತೂ ವಿಆರ್‌ಡಿಎಲ್ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಸಂಶೋಧನೆಗಳನ್ನು ನಡೆಸುತ್ತಿವೆ ಎಂದು ಅವರು ಹೇಳಿದ್ದಾರೆ.