ಪತ್ತನಂತಿಟ್ಟ: ಶಬರಿಮಲೆ ಅಯ್ಯಪ್ಪಸ್ವಾಮಿಗೆ ಮಂಡಲ ಪೂಜೆ ವೇಳೆ ಅರ್ಪಿಸುವ ಪವಿತ್ರ ಆಭರಣ ಸಹಿತ ವಸ್ತ್ರ ಹೊತ್ತ ರಥೋತ್ಸವವು ಆರನ್ಮುಳ ಪಾರ್ಥಸಾರಥಿ ದೇವಸ್ಥಾನದಿಂದ ಇಂದು ಹೊರಟಿದೆ.
ಡಿಸೆಂಬರ್ 26 ರಂದು ದೀಪಾರಾಧನೆಗೂ ಮುನ್ನ ಮೆರವಣಿಗೆ ಶಬರಿಮಲೆ ಸನ್ನಿಧಿಗೆ ತಲುಪಲಿದೆ. 27ರಂದು ಮಂಡಲ ಪೂಜೆ ನಡೆಯಲಿದೆ.
26ರಂದು ಮಧ್ಯಾಹ್ನ 3 ಗಂಟೆಗೆ ಪಂಬದಿಂದ ತಂಗ ಅಂಗಿ ಮೆರವಣಿಗೆ (ಪವಿತ್ರ ವಸ್ತ್ರ-ಆಭರಣ) ಹೊರಟು ಸಂಜೆ 5 ಗಂಟೆಗೆ ಸರಂಕುತ್ತಿ ತಲುಪಲಿದೆ. ಇಲ್ಲಿಂದ ಶಾಸ್ತ್ರೋಕ್ತವಾಗಿ ಬರಮಾಡಿಕೊಂಡು ಸನ್ನಿಧಾನಕ್ಕೆ ಕರೆದೊಯ್ಯಲಾಗುತ್ತದೆ. 18ನೇ ಮೆಟ್ಟಿಲು ಹತ್ತಿ ಸೋಪಾನಂ ತಲುಪಿದ ಬಳಿಕ ತಂತ್ರಿಗಳು ಸ್ವೀಕರಿಸಿ ಅಯ್ಯಪ್ಪ ಮೂರ್ತಿಗೆ ಉಡಿಸುವರು. 6.30ಕ್ಕೆ ದೀಪಾರಾಧನೆ ಪೂಜೆ ಸಲ್ಲಿಸಲಾಗುತ್ತದೆ. 27ರಂದು ಮಧ್ಯಾಹ್ನ ಆಭರಣ-ವಸ್ತ್ರ ಉಡಿಸಿ ಮಂಡಲ ಪೂಜೆ ನಡೆಯಲಿದೆ. ಈ ವಿಶೇಷ ವಸ್ತ್ರವನ್ನು ಮಂಡಲ ಪೂಜೆಗೆ ಧರಿಸಲು ತಿರುವಾಂಕೂರಿನ ಮಹಾರಾಜ ಅಯ್ಯಪ್ಪ ಸ್ವಾಮಿಗೆ ಸಮರ್ಪಿಸಲಾಗಿದೆ ಎಂಬ ಪ್ರತೀತಿ.
ಈ ವರ್ಷ ಕೊರೊನಾ ನಂತರದ ಮೊದಲ ಶಬರಿಮಲೆ ಯಾತ್ರೆಯಾಗಿದೆ. ಬುಕ್ ಮಾಡಿದವರಿಗೆ ಪ್ರವೇಶ ಕಲ್ಪಿಸಲಾಗಿದೆ. ಶಬರಿಮಲೆಗೆ ಭಕ್ತರ ದಂಡೇ ಹರಿದು ಬರುತ್ತಿದೆ. ನಿನ್ನೆ 84,483 ಮಂದಿ ದರ್ಶನಕ್ಕೆ ಬುಕ್ ಮಾಡಿದ್ದರು. ಸಂಚಾರ ದಟ್ಟಣೆ ಹೆಚ್ಚಿರುವ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆ ಹೆಚ್ಚಿಸಲಾಗಿದೆ.
ಶಬರಿಮಲೆಗೆ ಹೊರಟ ವಿಶೇಷ ವಸ್ತ್ರ-ಆಭರಣ ಮೆರವಣಿಗೆ: ಸೋಮವಾರ ಸನ್ನಿಧಿಗೆ: 27ರಂದು ಮಂಡಲ ಪೂಜೆ
0
ಡಿಸೆಂಬರ್ 23, 2022